ಉಡುಪಿ, ಆ.16: ತನ್ನ ಕಣ್ಣುಗಳನ್ನು ದಾನ ಮಾಡುವ ಮೂಲಕ ಹೋಟೆಲ್ ಸಿಬ್ಬಂದಿಯೊಬ್ಬರು ಸಾವಿನಲ್ಲು ಸಾರ್ಥಕತೆ ಮೆರೆದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಕಾಪು ತಾಲೂಕು ಶಿರ್ವ ಮಂಚಕಲ್ ನಿವಾಸಿ ಪಾಂಡುರಂಗ ಪ್ರಭು ಕೆಲವು ವರ್ಷಗಳಿಂದ ಬಂಟಕಲ್ ನ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು.
ಅಲ್ಪಕಾಲದ ಅನಾರೋಗ್ಯದಿಂದ ಪಾಂಡುರಂಗ ಪ್ರಭು ಕೊನೆಯುಸಿರೆಳೆದಿದ್ದಾರೆ. ಜೀವಿತಾವಧಿಯಲ್ಲೇ ಪ್ರಭು ಅವರು ತನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಹೇಳಿಕೊಂಡಿದ್ದರು. ತನ್ನ ನಿರ್ಧಾರದಂತೆ ಕುಟುಂಬಸ್ಥರ ಇಚ್ಛೆಯಂತೆ ಈ ವಿಚಾರವನ್ನು ಉಡುಪಿಯ ಪ್ರಸಾದ್ ನೇತ್ರಾಲಯ ಆಸ್ಪತ್ರೆಗೆ ತಲುಪಿಸಲಾಯ್ತು. ಮೃತ ದೇಹದಿಂದ ಕಣ್ಣುಗಳನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಮಾಡಿ ಬೇರ್ಪಡಿಸಲಾಯಿತು. ಕುಟುಂಬದ ಸದಸ್ಯ, ಉಡುಪಿಯ ಖಾಸಗಿ ವಾಹಿನಿ ಸ್ಪಂದನದಲ್ಲಿ ಉದ್ಯೋಗಿಯಾಗಿರುವ ಸುದರ್ಶನ್ ಪ್ರಭು ಅವರಿಗೆ ಸರ್ಟಿಫಿಕೇಟನ್ನು ಹಿರಿಯ ವೈದ್ಯ ಡಾ. ನಿತ್ಯಾನಂದ ನಾಯಕ್ ಹಸ್ತಾಂತರ ಮಾಡಿದರು.
ಸಮಾಜ ಸೇವಕ ನಿತ್ಯಾನಂದ ಒಳಕಾಡು ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲು ಸಹಾಯ ಮಾಡಿದರು. ಕಣ್ಣುಗಳ ಅವಶ್ಯಕತೆ ಇದ್ದರೂ ನೇತ್ರದಾನ ಮಾಡುವವರ ಸಂಖ್ಯೆ ಬಹಳ ಕಡಿಮೆ ಇದೆ. ಪಾಂಡುರಂಗ ಪ್ರಭು ಮತ್ತು ಮುಟುಂಬದವರ ಕಾಳಜಿ ಸಮಾಜಮುಖಿ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ಇನ್ನೊಬ್ಬರ ಬಾಳಿಗೆ ದೃಷ್ಟಿ ನೀಡುವ ಕೆಲಸವನ್ನು ಮಾಡಿದ್ದಾರೆ ಎಂದು ನಿತ್ಯಾನಂದ ಒಳಕಾಡು ಅಭಿಪ್ರಾಯಪಟ್ಟಿದ್ದಾರೆ.