ಕಿಂಗ್ ಫಿಷರ್ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆ : 25 ಕೋಟಿ ರೂ. ಮೌಲ್ಯದ ಬಿಯರ್ ಜಪ್ತಿ

ಮೈಸೂರು : ಕಿಂಗ್ ಫಿಷರ್ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿರುವ ವಿಚಾರ ಬಯಲಾಗಿದ್ದು, ಈ ಹಿನ್ನೆಲೆ 25 ಕೋಟಿ ರೂ. ಮೌಲ್ಯದ ಕಿಂಗ್ ಫಿಷರ್ ಬಿಯರ್ ಅನ್ನು ಮೈಸೂರಿನ ಅಬಕಾರಿ ಇಲಾಖೆ ಜಪ್ತಿ ಮಾಡಿದೆ.

ಜುಲೈ 15ರಂದು ಬಾಟಲಿಂಗ್ ಆದ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿರುವುದು ದೃಢವಾಗಿದ್ದು, ಬಿಯರ್‌ನಲ್ಲಿರುವ ಸೆಡಿಮೆಂಟ್ ಎಂಬ ಅಂಶ ದೇಹಕ್ಕೆ ಅಪಾಯಕಾರಿ ಎಂಬುದು ಲ್ಯಾಬ್‌ನಲ್ಲಿ ದೃಢವಾಗಿದೆ. ಈ ಮದ್ಯವನ್ನು ಅಂಗಡಿಗಳಿಗೆ ವಿತರಣೆ ಮಾಡದಂತೆ ಸೂಚನೆ ನೀಡಲಾಗಿದ್ದು, ಬಿಯರ್ ವಿತರಣೆ ಮಾಡದಂತೆ ಸುತ್ತೋಲೆ ಹೊರಡಿಸಲಾಗಿದೆ.

ಲ್ಯಾಬ್ ವರದಿಯಲ್ಲಿ ಅಪಾಯಕಾರಿ ಅಂಶ ದೃಢವಾದ ಹಿನ್ನೆಲೆ ಎಲ್ಲಾ ಬಿಯರ್ ಅನ್ನು ಅಬಕಾರಿ ಇಲಾಖೆ ಜಪ್ತಿ ಮಾಡಿದೆ. ನಂಜನಗೂಡಿನ ಯುನೈಟೆಡ್ ಬ್ರಿವರಿಸಿಸ್ ಕಂಪನಿ ಘಟಕದಲ್ಲಿ ತಯಾರಿಸಿದ್ದ ಬಿಯರ್ ಇದಾಗಿದ್ದು, ಈ ಬಗ್ಗೆ ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತ ಎ.ರವಿಶಂಕರ್ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಕಿಂಗ್ ಫಿಷರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಷರ್ ಅಲ್ಟ್ರಾ ಲ್ಯಾಗರ್ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಜುಲೈ 15 ರಂದು ಬಾಟಲಿಂಗ್ ಆದ ಬಿಯರ್‌ನಲ್ಲಿ ಈ ಅಂಶ ಪತ್ತೆಯಾಗಿದೆ. ಬಿಯರ್ ಸ್ಯಾಂಪಲ್ ಅನ್ನು ಕೆಮಿಕಲ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಆಗಸ್ಟ್ 2ರಂದು ಕೆಮಿಕಲ್ ವರದಿ ಬಂದಿದೆ. ವರದಿಯಲ್ಲಿ ಈ ಬಿಯರ್ ಮಾನವ ಬಳಕೆಗೆ ಯೋಗ್ಯವಲ್ಲ ಎಂದು ತಿಳಿಸಿದೆ ಎಂದರು.

ಹೀಗಾಗಿ ಒಟ್ಟು 78,678 ಬಾಕ್ಸ್ ಬಿಯರ್ ಅನ್ನು ಜಪ್ತಿ ಮಾಡಲಾಗಿದೆ. ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣ ಕಂಪನಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೆಲ ಡಿಪೋದಿಂದ ಅಂಗಡಿಗಳಿಗೂ ಇದು ವಿತರಣೆಯಾಗಿತ್ತು. ರಿಟೇಲ್‌ನಲ್ಲಿ ಮಾರಾಟವಾಗದಂತೆ ಅದನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.

You cannot copy content from Baravanige News

Scroll to Top