ಬೆಂಗಳೂರು : ತಂದೆಯ ಜೊತೆ ಮಗಳು ಶಾಲೆಗೆ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭ ಬಿಎಂಟಿಸಿ ಬಸ್ ಬೈಕ್ ಗೆ ಢಿಕ್ಕಿ ಹೊಡೆದು ಬಾಲಕಿ ರೋಡ್ ಗೆ ಬಿದ್ದ ಪರಿಣಾಮ ಆಕೆಯ ಮೇಲೆ ಬಸ್ ಹರಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರು ಇಂಟರ್ ನ್ಯಾಶನಲ್ ಪಬ್ಲಿಲ್ ಸ್ಕೂಲ್ ನ ಪ್ರಿ ಕೆಜಿ ವಿದ್ಯಾರ್ಥಿನಿ ಪೂರ್ವಿ ರಾವ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.
ಪೂರ್ವಿಯನ್ನು ಶಾಲೆಗೆ ಬಿಡಲೆಂದು ಆಕೆಯ ತಂದೆ ಪ್ರಸನ್ನ ಅವರು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ ಉತ್ತರಹಳ್ಳಿ ಮುಖ್ಯರಸ್ತೆಯ ಪದ್ಮಾವತಿ ಸಿಲ್ಕ್ ಶೋ ರೂಂ ಬಳಿ ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್ ಗೆ ಢಿಕ್ಕಿ ಹೊಡೆದಿದೆ.
ಇದರಿಂದ ಬೈಕ್ ಬಿದ್ದು, ಬೈಕ್ ನಲ್ಲಿದ್ದ ಪ್ರಸನ್ನ ಅವರು ದ್ವಿಚಕ್ರ ವಾಹನದ ಎಡಬದಿಗೆ ಬಿದ್ದರೆ ಮಗಳು ಪೂರ್ವಿ ಬಲಬದಿ ಬಿದ್ದಿದ್ದಾರೆ.ಪೂರ್ವಿ ಬಲ ಬದಿ ಬಿದ್ದ ಕಾರಣ ಈ ವೇಳೆ ಆಕೆ ಮೇಲೆ ಬಸ್ ಹರಿದುಹೋಗಿದೆ.
ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.