ಆತ ಪೊಲೀಸ್ ಅಲ್ಲ. ಪೊಲೀಸ್ ಆಗೋ ವಯಸ್ಸು ಅವನದಲ್ಲ. ಆದ್ರೆ ಜಬರ್ದಸ್ತ್ ಆಗಿ ಪೊಲೀಸರ ಯೂನಿಫಾರ್ಮ್ ತೊಟ್ಟು ಠಾಣೆಗೆ ಎಂಟ್ರಿಕೊಟ್ಟಿದ್ದ. ಇನ್ಸ್ಪೆಕ್ಟರ್ ಚೇರ್ ಮೇಲೆ ಕುಳಿತು ಸಿಬ್ಬಂದಿ ಬಳಿ ಸೆಲ್ಯೂಟ್ ಮಾಡಿಸಿಕೊಂಡಿದ್ದ. ಹಾಗಿದ್ರೆ ಯಾರು ಆ ಪೋರ? ಆತ ಪೊಲೀಸ್ ಆಗಿದ್ದು ಹೇಗೆ ಅಂತೀರ ಈ ಸ್ಟೋರಿ ಓದಿ.
ಮನುಷ್ಯ ಜನ್ಮ ನೀರ ಮೇಲಿನ ಗುಳ್ಳೆ ಇದ್ದಂತೆ. ಅದ್ಯಾವಾಗ ಒಡೆದು ಹೋಗುತ್ತೋ ಆ ಭಗವಂತನೇ ಬಲ್ಲ. ಇರುವಷ್ಟು ದಿನ ನೀರಿನಂತೆ ನಿಷ್ಕಲ್ಮಶವಾದ ಜೀವನ ನಡೆಸಬೇಕು. ಆದರೆ ಅಂತದೊಂದು ನಿಷ್ಕಲ್ಮಶವಾದ ಮನಸ್ಸಿರೋ ಜೀವಕ್ಕೆ ಸಾವು ಸನಿಹವಿದೆ ಅನ್ನೋ ಸುದ್ದಿ ಗೊತ್ತಾದ್ರೆ ಹೇಗಿರುತ್ತೆ ಅಲ್ವಾ. ಸದ್ಯ ಇದೇ ರೀತಿ ಬಾಳಿ ಬದುಕ ಬೇಕಿದ್ದ ಪುಟ್ಟಪೋರನೊಬ್ಬನ ಬಾಳಲ್ಲಿ ಸಾವು ಚೆಲ್ಲಾಟವಾಡ ತೊಡಗಿದೆ.
ಪೊಲೀಸರ ಸಮವಸ್ತ್ರ. ಟೇಬಲ್ ಮೇಲೆ ಫೈಲ್. ಕೈಯಲ್ಲಿ ಪೆನ್ ಹಿಡಿದು ಗಾಂಭೀರ್ಯತೆಯಿಂದ ಬರೆಯುತ್ತಿರೋ ಪೋರ. ಅರೆರೆ ಈ ಪೋರ ಪೊಲೀಸ್ ಆಗಿದ್ದು ಹೇಗೆ ಅಂತ ನೀವು ಯೋಚನೆ ಮಾಡ್ತಿರ್ಬೋದು. ವಿಧಿಯಾಟಕ್ಕೆ ಕೈಗೊಂಬೆ ಆಗಿರೋ ಈ ಬಾಲಕನ ಬದುಕು ಸದ್ಯ ಈ ಪೊಲೀಸರ ಕುರ್ಚಿಯ ಮೇಲೆ ತಂದು ಕೂರಿಸಿದೆ. ಈ ಪೋರ ಹೀಗೆ ಕಾಣಿಸಿರೋದರ ಹಿಂದೆ ಒಂದು ಕರಳು ಹಿಂಡುವ ಕತೆಯೇ ಇದೆ.
ಬಾಳಿ ಬದುಕಬೇಕಿದ್ದ ಬಾಲಕನಿಗೆ ಹೃದಯದ ಕಾಯಿಲೆ ಇದೆ. ಆಜಾನ್ ಖಾನ್ಗೆ ಆಪರೇಷನ್ ಹಿನ್ನೆಲೆ ಅವನ ಆಸೆಯನ್ನು ಈಡೇರಿಸಿದ ಶಿವಮೊಗ್ಗ ಪೊಲೀಸರು, ಒಂದು ಗಂಟೆ ಇನ್ಸ್ಪೆಕ್ಟರ್ ಆಗುವ ಮೂಲಕ ಆಜಾನ್ ಖಾನ್ ಆಸೆ ಈಡೇರಿಸಿದ್ದಾರೆ.
ಬಾಳಿ ಬದುಕಬೇಕಿದ್ದ ಬಾಲಕನಿಗೆ ಭಾರವಾಯ್ತು ‘ಹೃದಯ’
ಈ ಬಾಲಕನ ಹೆಸರು ಆಜಾನ್ ಖಾನ್. ವಯಸ್ಸು 8 ವರ್ಷ. ಆದರೆ ಆ 8 ವರ್ಷದಲ್ಲಿ ಈತ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಆ ನೋವಿಗೆ ಕಾರಣ ಎದೆಚಿಪ್ಪಿನಲ್ಲಿ ಅಡಗಿರೋ ಅವನದ್ದೇ ಹೃದಯ.
ಸುದೀಪ್ ನೋಡಬೇಕು.. ಇನ್ಸ್ಪೆಕ್ಟರ್ ಆಗಬೇಕು ಎಂಬ ಆಸೆ
ಚಿಕ್ಕಮಗಳೂರು ಜಿಲ್ಲೆಯ ಬಾಳೇಹೊನ್ನೂರಿನ ತಬ್ರೇಜ್ ಖಾನ್ ಮತ್ತು ತಾಯಿ ನಗ್ಮಾ ದಂಪತಿ ಪುತ್ರ ಈ ಆಜಾನ್ ಖಾನ್. ಆಜಾನ್ ಖಾನ್ ಹುಟ್ಟುವಾಗಲೇ ಹಾಫ್ ಹಾರ್ಟೆಡ್ ಮಗುವಾಗಿ ಹುಟ್ಟಿದ್ದ. ಹುಟ್ಟಿನಿಂದಲೂ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲಿದ್ದ ಆಜಾನ್ಗೆ ಹುಟ್ಟಿದಾಗಲೇ ಒಂದು ಶಸ್ತ್ರಚಿಕಿತ್ಸೆ ಆಗಿತ್ತು. ಆದರೆ ಸದ್ಯ 8 ವರ್ಷದ ಈ ಆಜಾನ್ಗೆ ಈಗ ಮತ್ತೊಂದು ಶಸ್ತ್ರಚಿಕಿತ್ಸೆ ಆಗಬೇಕಿದೆ. ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೃದಯ ಮತ್ತು ಲಂಗ್ಸ್ ಕಸಿ ಮಾಡಲಿದ್ದಾರೆ. ಆದರೆ ಈ ಶಸ್ತ್ರ ಚಿಕಿತ್ಸೆ ಆಜಾನ್ ಬಾಳಲ್ಲಿಗೆ ಬೆಳಕಾಗುತ್ತೋ ಅಥವಾ ಬಿರುಗಾಳಿಯಾಗುತ್ತೋ ಅನ್ನೋ ಅನುಮಾನವೂ ಇದೆ. ಹೀಗಾಗಿ ಮುದ್ದು ಮಗ ಆಜಾನ್ ಖಾನ್ನನ್ನ ಉಳಿಸಿಕೊಳ್ಳುವ ತವಕದಲ್ಲಿ ಆತನ ಪೋಷಕರಿದ್ದಾರೆ. ಮಗನ ಮನಸ್ಸಿನಲ್ಲಿಲೋ ಕೆಲ ಆಸೆಗಳನ್ನ ಈಡೇರಿಸಲು ಮುಂದಾಗಿದ್ದಾರೆ. ಈ ಹಿನ್ನಲೆ ನಟ ಸುದೀಪ್ರನ್ನ ನೋಡಬೇಕು. ದೊಡ್ಡವನಾದಾಗ ಇನ್ ಸ್ಪೆಕ್ಟರ್ ಆಗಬೇಕು ಅನ್ನೋ ಆಜಾನ್ನ ಆಸೆಗೆ ಜೀವ ತುಂಬಲು ಪೋಷಕರು ಮುಂದಾಗಿದ್ದಾರೆ.
ಆಜಾನ್ ಆಸೆ ಇಡೇರಿಸಿದ ಶಿವಮೊಗ್ಗ ಪೊಲೀಸರು
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರೋ ಆಜಾನ್ ಆಸೆ ಶಿವಮೊಗ್ಗದ ಎಸ್ಪಿ ಮಿಥುನ್ ಕುಮಾರ್ಗೆ ತಿಳಿದಿತ್ತು. ತಕ್ಷಣ ಪೋಷಕರ ಜೊತೆ ಮಾತುಕತೆ ನಡೆಸಿ ಆಜನ್ಗೆ ಜಬರ್ದಸ್ತ್ ಆಗಿ ಪೊಲೀಸರ ಸಮವಸ್ತ್ರ ತೊಡಿಸಿ ಠಾಣೆಗೆ ಸ್ವಾಗತ ಮಾಡೇ ಬಿಟ್ರು. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಖಡಕ್ ಅಧಿಕಾರಿಯಂತೆ ಎಂಟ್ರಿಕೊಟ್ಟ ಆಜಾನ್ಗೆ ಎಲ್ಲರೂ ಸೆಲ್ಯೂಟ್ ಮಾಡಿದ್ರು. ಬಳಿಕ ಇನ್ಸ್ಪೆಕ್ಟರ್ ಚೇರ್ ಏರಿ ಕುಳಿತ ಆಜಾನ್ ಕೆಲವೊತ್ತು ಪೊಲೀಸ್ ಅಧಿಕಾರಿಯಂತೆ ಪೋಸ್ಕೊಟ್ಟು ಖುಷಿಪಟ್ಟ.
ಶಿವಮೊಗ್ಗ ಪೊಲೀಸರ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ
ಸಾವು ಬದುಕಿನ ಮಧ್ಯೆ ಸೆಣಸಾಟ ನಡೆಸುತ್ತಿರುವ ಬಾಲಕನ ಆಸೆಯನ್ನ ಇಡೇರಿಸಿದ ಶಿವಮೊಗ್ಗ ಎಸ್ಪಿ ಹಾಗೂ ದೊಡ್ಡಪೇಟೆ ಠಾಣೆಯ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮಗನ ಕನಸನ್ನ ನನಸಾಗಿಸಿದ ಪೊಲೀಸರಿಗೆ ಆಜಾನ್ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ. ಆಜಾನ್ ಸಹ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾನೆ.
ಒಟ್ಟಿನಲ್ಲಿ ಬಾಳಿ ಬದುಕಿ ಪೋಷಕರ ಪಾಲಿಕೆ ಬೆಳಕಾಗಬೇಕಿರೋ ಆಜಾನ್ ಬೇಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಗುಣಮುಖನಾಗಲಿ. ಖಾಯಿಲೆಯನ್ನ ಗೆದ್ದು ಮತ್ತೆ ಆಜಾನ್ ಬಾಳಲ್ಲಿ ಹೊಸ ಬೆಳಕು ಮೂಡಿ, ಆ ಮುಗ್ದ ಮುಖದ ಮೇಲೆ ನಗು ಬರಲಿ ಅಂತ ಪ್ರಾರ್ಥಿಸೋಣ…