ಮದುವೆ ಮುನ್ನವೇ ಭಾವಿ ಪತ್ನಿಯನ್ನ ಪ್ರೊಡ್ಯೂಸರ್ ಮಾಡಿದ ಭುವನ್ ಪೊನ್ನಣ್ಣ

ನಟಿ ಹರ್ಷಿಕಾ ಹಾಗೂ ಭುವನ್ ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋ ವಿಚಾರ ಎಲ್ಲರಿಗೂ ಗೊತ್ತಿರುವ ವಿಚಾರ. ಇದೇ ಮದುವೆ ಶುಭ ಸುದ್ದಿ ನೀಡುವ ಜೊತೆಗೆ ನಟ ಭುವನ್ ಹಾಗೂ ಹರ್ಷಿಕಾ ಪೂಣಚ್ಚ ತಮ್ಮ ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾರೆ. ಅದರ ಜೊತೆಗೆ ಹೊಸ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಮಾಡಿದ್ದಾರೆ.

ಭುವನ್ ಹಾಗೂ ಹರ್ಷಿಕಾ ಪ್ರೊಡಕ್ಷನ್ ಹೌಸ್‌ಗೆ ‘ಭುವನಂ ಎಂಟರ್‌ಟೈನ್‌ಮೆಂಟ್’ ಎಂದು ಹೆಸರಿಡಲಾಗಿದ್ದು, ಅದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ “ಭುವನಂ ಶ್ರೇಷ್ಠಮ್ ಗಚ್ಚಾಮಿ” ಎಂದು ಹೆಸರಿಡಲಾಗಿದೆ.

ಇದೊಂದು ಬಾಕ್ಸರ್‌ನ ಕಥೆ ಆಧರಿಸಿದ ಚಿತ್ರವಾಗಿದೆ. ಆರು ವರ್ಷದ ಹಿಂದೆಗೆ ಈ ರೀತಿಯ ಸಿನಿಮಾ ಒಂದನ್ನ ಮಾಡಬೇಕು ಎಂದು ಭುವನ್ ಹಾಗೂ ಹರ್ಷಿಕಾ ಪ್ಲಾನ್ ಮಾಡಿಕೊಂಡಿದ್ದರಂತೆ. ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಭುವನ್ ಪೊನ್ನಣ್ಣ ಸಾಕಷ್ಟು ತರಬೇತಿ ಪಡೆದುಕೊಂಡಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ ಇರಲಿದೆ. ಈ ಚಿತ್ರದಲ್ಲಿ ರೆಟ್ರೊ ಶೈಲಿಯಲ್ಲೂ ಭುವನ್ ಅವರನ್ನು ನೋಡಬಹುದು. ಸಿನಿಮಾಗಳ ಸಂಖ್ಯೆಗಿಂತಲೂ ಗುಣಮಟ್ಟ ಮುಖ್ಯ ಎನ್ನುವ ಭುವನ್ ಗಡಿಬಿಡಿಯಲ್ಲಿ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಕಳೆದ ಎರಡು ವರ್ಷಗಳಿಂದ ಈ ಸಿನಿಮಾದ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ.

ಸದ್ಯ ಮದುವೆಯ ಸಂದರ್ಭದಲ್ಲಿ ಈ ಖುಷಿಯ ಸುದ್ದಿಯನ್ನು ಕೂಡ ಭುವನ್ ಹಾಗೂ ಹರ್ಷಿಕಾ ಮಾಧ್ಯಮ ಮಿತ್ರರ ಜೊತೆ ಹಂಚಿಕೊಂಡಿದ್ದಾರೆ. ಮದುವೆ ಸಮಾರಂಭ ಎಲ್ಲವನ್ನು ಮುಗಿಸಿಕೊಂಡು ಶೀಘ್ರದಲ್ಲಿ ಸಿನಿಮಾ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ. ಇನ್ನು, ಈ ಸಿನಿಮಾಗೆ ಭುವನ್ ಅವರೇ ಕಥೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ. ಭುವನ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದು ಹರ್ಷಿಕಾ ನಿರ್ಮಾಪಕಿಯಾಗಿ ಮೊದಲ‌ ಬಾರಿಗೆ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಚಿತ್ರಕ್ಕೆ ನಾಯಕಿಯಾಗಿ ಕೊಡಗು ಮೂಲದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಭುವನ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

You cannot copy content from Baravanige News

Scroll to Top