ಉಡುಪಿ : ಹೊಸದಾಗಿ ಮದುವೆಯಾದವರೇ ಹೆಚ್ಚಾಗಿ ಭಾಗವಹಿಸುವ ಜಾತ್ರೆಯೊಂದು ಕರಾವಳಿ ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಸಿಂಹ ಸಂಕ್ರಮಣದ ದಿನವಾದ ಇಂದು ಪೆರ್ಡೂರು ಅನಂತಪದ್ಮನಾಭ ಕ್ಷೇತ್ರದಲ್ಲಿ ನಡೆಯುವ ಮದುಮಕ್ಕಳ ಜಾತ್ರೆಯಲ್ಲಿ ನವದಂಪತಿಗಳದ್ದೇ ಕಲರವ. ಇಂದು ಸಿಂಹ ಸಂಕ್ರಮಣ. ಕರಾವಳಿಗರು ಆಷಾಡ ಕಳೆದು ಶ್ರಾವಣವನ್ನು ಬರಮಾಡಿಕೊಳ್ಳುವ ಸುದಿನ. ಅನಾದಿ ಕಾಲದಿಂದಲೂ ಈ ಭಾಗದಲ್ಲಿ ಒಂದು ಸಂಪ್ರದಾಯವಿದೆ.
ಈ ವಸಂತದಲ್ಲಿ ಮದುವೆಯಾದ ನವ ದಂಪತಿಗಳು ಆಷಾಡದಲ್ಲಿ ತವರಿಗೆ ಹೋಗುತ್ತಾರೆ. ಸಿಂಹ ಸಂಕ್ರಮಣದ ದಿನ ಪತಿಯ ಮನೆಗೆ ವಾಪಾಸಾಗುತ್ತಾರೆ. ಆದರೆ ಪತಿ ಮನೆಗೆ ಹೋಗುವ ಮುನ್ನ ಪೆರ್ಡೂರು ಅನಂತ ಪದ್ಮನಾಭ ದೇವರ ದರ್ಶನ ಮಾಡಬೇಕು ಅನ್ನೋದು ಶೃದ್ಧಾಳುಗಳ ನಂಬಿಕೆ. ಹಾಗಂತಲೇ ಇಂದು ನಸುಕಿನಿಂದಲೇ ಸಾವಿರಾರು ನವದಂಪತಿಗಳು ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಸಂಕ್ರಮಣ ಜಾತ್ರೆಯಲ್ಲಿ ಭಾಗವಹಿಸಿದರು.
ಪೆರ್ಡೂರು ಕ್ಷೇತ್ರದ ಅನಂತಪದ್ಮನಾಭ ದೇವರಿಗೆ ಬಾಳೆ ಹಣ್ಣು ಅಂದರೆ ಅತಿಯಾದ ಪ್ರೀತಿ. ಹರಕೆ ಹೊತ್ತ ನವದಂಪತಿಗಳು ಬುಟ್ಟಿಗಟ್ಟಲೆ ಬಾಳೆ ಹಣ್ಣನ್ನು ದೇವರಿಗೆ ಅರ್ಪಿಸುತ್ತಾರೆ. ತಿರುಪತಿ ತಿಮ್ಮಪ್ಪನ ದರ್ಶನ ಮಾಡಲಾಗದವರು, ಪೆರ್ಡೂರು ಅನಂತ ಪದ್ಮನಾಭನಿಗೆ ಹರಿಕೆ ತೀರಿಸುವ ಸಂಪ್ರದಾಯವೂ ಇಲ್ಲಿದೆ. ಉಡುಪಿ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಂದ ಸಾವಿರಾರು ಭಕ್ತರು ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.