ಧಾರವಾಡ, ಆ.18: ಮೃತಪಟ್ಟಿದ್ದಾನೆ ಅಂದುಕೊಂಡಿದ್ದ ಮಗುವೊಂದು ಅಂತ್ಯಕ್ರಿಯೆ ವೇಳೆ ಉಸಿರಾಡಿರುವ ವಿಚಿತ್ರ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದೆ.
ಒಂದೂವರೆ ವರ್ಷದ ಆಕಾಶ ಬಸವರಾಜ ಪೂಜಾರ ಎಂಬ ಬಾಲಕ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ. ಈತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ ಎಂದು ಕಿಮ್ಸ್ ವೈದ್ಯರು ಹೇಳಿದ್ದರು.
ಹೀಗಾಗಿ ಆಕಾಶನನ್ನು ಊರಿನಲ್ಲಿಯೇ ಅಂತ್ಯಕ್ರಿಯೆ ಮಾಡಲು ಪಾಲಕರು ಬಸಾಪುರ ಗ್ರಾಮಕ್ಕೆ ತೆಗೆದುಕೊಂಡು ಬಂದಿದ್ದಾರೆ. ಅಲ್ಲದೇ ಸ್ಮಶಾನದಲ್ಲಿ ಅಂತ್ಯಕ್ರಿಯೆಯ ಅಂತಿಮ ವಿಧಿ ವಿಧಾನ ಕೂಡ ನಡೆದಿತ್ತು. ಇನ್ನೇನು ಮೃತ ಬಾಲಕನ ಬಾಯಲ್ಲಿ ಎರಡು ಹನಿ ನೀರು ಹಾಕುತ್ತಿದ್ದಂತೆ ಬಾಲಕ ಆಕಾಶ ಉಸಿರಾಡಿದ್ದಾನೆ.
ಮಗು ಕೈಕಾಲು ಅಲುಗಾಡಿಸಿದ್ದಕ್ಕೆ ಪೋಷಕರು ಮತ್ತೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಮಗುವಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.