ಅಹಮದಾಬಾದ್ : ವಿಕ್ರಮ್ ಲ್ಯಾಂಡರ್ ಆಗಸ್ಟ್ 23ರಂದು ಲ್ಯಾಂಡ್ ಆಗಲಿದ್ದು, ಲ್ಯಾಂಡರ್ ಮಾಡ್ಯೂಲ್‌ಗೆ ಸಂಬಂಧಿಸಿದಂತೆ ಯಾವುದೇ ಅಂಶ ಪ್ರತಿಕೂಲವಾಗಿ ಕಂಡುಬಂದರೆ ಲ್ಯಾಂಡಿಂಗ್ ಅನ್ನು ಆಗಸ್ಟ್ 27ಕ್ಕೆ ಮಂದೂಡಲಾಗುವುದು ಎಂದು ಚಂದ್ರಯಾನ-3ರ ಕುರಿತು ಇಸ್ರೋ ಮಹತ್ವದ ಹೇಳಿಕೆಯನ್ನು ನೀಡಿದೆ.
ಲ್ಯಾಂಡರ್ ಮಾಡ್ಯೂಲ್‌ನ ಸ್ಥಿತಿ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಹಮದಾಬಾದ್‌ನ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ ಇಸ್ರೋದ ನಿರ್ದೇಶಕ ನೀಲೇಶ್ ಎಂ.ದೇಸಾಯಿ ಮಾಹಿತಿ ನೀಡಿದ್ದಾರೆ.
ಲ್ಯಾಂಡಿಂಗ್ ಮೊದಲು ಮಾಡ್ಯೂಲ್‌ನ ಸ್ಥಿತಿ ಪರಿಶೀಲನೆ:
ಆಗಸ್ಟ್ 23ರಂದು ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು ಲ್ಯಾಂಡರ್ ಮಾಡ್ಯೂಲ್‌ನ ಸ್ಥಿತಿ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ಆ ಸಮಯದಲ್ಲಿ ಲ್ಯಾಂಡಿಂಗ್ ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ನಾವು ನಿರ್ಧರಿಸುತ್ತೇವೆ. ಯಾವುದೇ ಅಂಶ ಅನುಕೂಲಕರವಾಗಿಲ್ಲ ಎಂದು ತೋರಿದರೆ ಆಗಸ್ಟ್ 27ರಂದು ಮಾಡ್ಯೂಲ್ ಅನ್ನು ಚಂದ್ರನ ಮೇಲೆ ಇಳಿಸುತ್ತೇವೆ. ಆಗಸ್ಟ್ 23ರಂದು ಲ್ಯಾಂಡಿಂಗ್ ವೇಳೆ ಯಾವುದೇ ಸಮಸ್ಯೆ ಎದುರಾಗದಿರಲಿ ಎಂದು ದೇಸಾಯಿ ಹೇಳಿದ್ದಾರೆ.
ಇಸ್ರೋ ಅಧ್ಯಕ್ಷ ಮತ್ತು ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಎಸ್ ಸೋಮನಾಥ್ ಅವರು ಕೇಂದ್ರ ರಾಜ್ಯ ಸಚಿವ ವಿಜ್ಞಾನ ಮತ್ತು ತಂತ್ರಜ್ಞಾನ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಜಿತೇಂದ್ರ ಸಿಂಗ್ ಅವರನ್ನು ಸೋಮವಾರ ನವದೆಹಲಿಯಲ್ಲಿ ಭೇಟಿ ಮಾಡಿ ಚಂದ್ರಯಾನ-3ರ ಸ್ಥಿತಿ ಮತ್ತು ಸಿದ್ಧತೆಯ ಬಗ್ಗೆ ತಿಳಿಸಿದರು.