ಕೊನೆಗೂ ಚಂದ್ರನ ಅಂಗಳಕ್ಕೆ ಕಾಲಿಟ್ಟ ಚಂದ್ರಯಾನ-3; ಹೊಸ ಇತಿಹಾಸ ನಿರ್ಮಿಸಿದ ಭಾರತ

ಬಹುನಿರೀಕ್ಷಿತ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿದೆ. ಪ್ರಜ್ಞಾನ್​​ ರೋವರ್ ಹೊತ್ತ ಈ ವಿಕ್ರಮ್ ಲ್ಯಾಂಡರ್ ಬರೋಬ್ಬರಿ 40 ದಿನಗಳ ಸುದೀರ್ಘ ಪಯಣದ ನಂತರ ದಕ್ಷಿಣ ಧ್ರುವದ ಮೇಲೆ ಯಾವುದೇ ಅಡೆತಡೆ ಇಲ್ಲದೆ ನಿಧಾನವಾಗಿ ಲ್ಯಾಂಡ್​​ ಆಗುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಕ್ಷಣವನ್ನು ಇಡೀ ಜಗತ್ತೇ ಕಣ್ತುಂಬಿಕೊಂಡಿದೆ.

ಇಂದು ಭಾರತಕ್ಕೆ ಐತಿಹಾಸಿಕ ದಿನ. ಈ ಹೆಮ್ಮೆಯ ದಿನಕ್ಕಾಗಿ ಇಡೀ ದೇಶ‌‌ವೇ ಕಾಯುತ್ತಿತ್ತು. ಚಂದ್ರಯಾನ 3 ಯಶಸ್ವಿಯಾಗಲಿ‌ ಎಂದು ಇಡೀ ಭಾರತ ಪ್ರಾರ್ಥನೆ ಮಾಡಿತ್ತು. ಕೋಟ್ಯಾಂತರ ಭಾರತೀಯರ ಕನಸು ನನಸಾಗಿದೆ.

ಇದುವರೆಗೂ ಚಂದ್ರನ ಅಂಗಳಕ್ಕೆ ರಷ್ಯಾ, ಅಮೆರಿಕ ಮತ್ತು ಚೀನಾ ಮಾತ್ರ ರೋವರ್​ ಕಳುಹಿಸಿತ್ತು. ಆದರೆ, ಚಂದ್ರನ ದಕ್ಷಿಣ ಧ್ರುವಕ್ಕೆ ಯಾವ ರಾಷ್ಟ್ರವೂ ಕಾಲಿಟ್ಟಿರಲಿಲ್ಲ. ಈಗ ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗಿದೆ.

ಇನ್ನು, ವಿದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿಯವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಬೆಂಗಳೂರಿನಲ್ಲಿರೋ ಇಸ್ರೋ ಕೇಂದ್ರಕ್ಕೂ ಹಲವು ಗಣ್ಯರು ಆಗಮಿಸಿ ವೀಕ್ಷಣೆ ಮಾಡುತ್ತಿದ್ದಾರೆ. ಇಸ್ರೋ ಸಂಸ್ಥೆಯ ಕಾರ್ಯಕ್ಕೆ ಇಡೀ ದೇಶವೇ ಹೆಮ್ಮೆಪಟ್ಟಿದೆ.

ವಿಕ್ರಮ್ ಲ್ಯಾಂಡರ್ ಚಂದ್ರನಿಂದ 2.1 ಕಿ.ಮೀ ದೂರದಲ್ಲಿದ್ದಾಗಲೇ ಎಲ್ಲವೂ ಸಾಮಾನ್ಯವಾಗಿತ್ತು. ಆನಂತರ ಕೆಲವು ಕಾಲ ಲ್ಯಾಂಡರ್​ ಹಾಗೂ ಭೂಮಿ ನಡುವೆ ಇದ್ದ ಸಂಪರ್ಕ ಕಡಿತಗೊಂಡಿತ್ತು. ಕೊನೆಗೂ ಲ್ಯಾಂಡರ್​ ಕಾಣಿಸಿದ ಬಳಿಕ ಯೋಜನೆ ಯಶಸ್ವಿಯಾಗಿ ಲ್ಯಾಂಡಿಂಗ್​ ಮಾಡಿದ್ದಾರೆ.

Scroll to Top