ಶಿರ್ವ, ಆ.23: ಕಾಪು ವಿಧಾನಸಭಾ ಕ್ಷೇತ್ರದ ಮುದರಂಗಡಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬಹುಮತವಿದ್ದರೂ, ಮೀಸಲಾತಿಯಿಂದಾಗಿ ಅಧ್ಯಕ್ಷ ಸ್ಥಾನ ಕಳಕೊಂಡು, ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಮುದರಂಗಡಿ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 15 ಸದಸ್ಯರಿದ್ದು, ಬಿಜೆಪಿ ಬೆಂಬಲಿತ 10 ಮತ್ತು ಕಾಂಗ್ರೆಸ್ ಬೆಂಬಲಿತ 5 ಸದಸ್ಯರಿದ್ದಾರೆ. ಇಂದು ನಡೆದ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಆದರೆ 10 ಸದಸ್ಯರ ಬಲವಿದ್ದರೂ, ಪರಿಶಿಷ್ಟ ಜಾತಿ ಮಹಿಳೆ ಬಿಜೆಪಿಯಲ್ಲಿ ಇಲ್ಲದಿರುವುದರಿಂದ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ. ಕೇವಲ 5 ಸದಸ್ಯ ಬಲವಿದ್ದರೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಗೆದ್ದುಕೊಂಡು ಸಂಭ್ರಮಿಸಿದೆ. ಪರಿಶಿಷ್ಟ ಜಾತಿ ಮೀಸಲಾತಿಯಿಂದಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ನಮಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಮೋಹಿನಿ ಹೆಗ್ಡೆ ಅವಿರೋಧ ಆಯ್ಕೆಯಾಗಿದ್ದು, ಸ್ಪಷ್ಟ ಬಹುಮತವಿದ್ದ ರೂ ಮೀಸಲಾತಿಯಿಂದಾಗಿ ಅಧ್ಯಕ್ಷ ಸ್ಥಾನ ಕಳೆದು ಕೊಂಡು ಕೇವಲ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ತೃಪ್ತಿ ಪಡುವಂತಾಗಿದೆ.
ಬಹುಮತವಿಲ್ಲದಿದ್ದರೂ ಅಧ್ಯಕ್ಷ ಸ್ಥಾನ ಪಡಕೊಂಡ ಕಾಂಗ್ರೆಸ್ ಮುದರಂಗಡಿಯಲ್ಲಿ ಭರ್ಜರಿವಿಜಯೋತ್ಸವ ಆಚರಿಸಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ತಾಲೂಕ್ ಪಂಚಾಯತ್ ಸದಸ್ಯ ಮೈಕಲ್ ಡಿಸೋಜಾ, ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.