ಬೆಂಗಳೂರು, ಆ 24: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಆ.30ರಂದು ಮೈಸೂರಿನಲ್ಲಿ ಚಾಲನೆ ದೊರೆಯಲಿದ್ದು, ಅದಕ್ಕಾಗಿ ಈಗ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಪ್ರತಿ ತಿಂಗಳು ಮಹಿಳೆಯರ ಖಾತೆಗೆ 2000 ರೂ. ಜಮೆ ಮಾಡಲಾಗುತ್ತಿದ್ದು, ಯೋಜನೆಗಾಗಿ ಅರ್ಜಿ ಸಲ್ಲಿಸಿದವರು ಮಾತ್ರ ಯೋಜನೆಯ ಫಲ ಪಡೆಯಬಹುದು.
ಈ ಕಾರ್ಯಕ್ರಮದ ನೇರ ಪ್ರಸಾರವು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯೂ ಮಾಡುವುದಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂದು ಸಿಎಂ ಸಿದ್ದರಾಮಯ್ಯ ಕೂಡ ಫಲಾನುಭವಿಗಳೊಂದಿಗೆ ಸಂವಾದ ನಡೆಸುವ ಸಾಧ್ಯತೆಯಿದ್ದು, ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಫಲಾನುಭವಿಗಳನ್ನು ಗುರುತಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.