ನನಗೆ ಮಾತನಾಡುವ ತೀಟೆಯಲ್ಲ, ಹೆಣ್ಣು ಮಗುವಿಗೆ ನ್ಯಾಯ ಕೊಡಿಸೋದು ನನ್ನ ಗುರಿ; ಕುಂದಾಪುರದಲ್ಲಿ ಮತ್ತೆ ಗುಡುಗಿದ ತಿಮರೋಡಿ

ಕುಂದಾಪುರ, ಆ.25: ಸೌಜನ್ಯ ಪ್ರಕರಣದ ತನಿಖೆಯನ್ನು ಕೇಂದ್ರ ಸರಕಾರದ ಮೇಲೆ ಹಾಕಿ ರಾಜ್ಯ ಸರಕಾರ ಕೈತೊಳೆದುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಆರೋಪಿಸಿದ್ದಾರೆ.

ಸೌಜನ್ಯ ಪರ ನ್ಯಾಯಕ್ಕಾಗಿನ ಹೋರಾಟ ಸಮಿತಿ ಕುಂದಾಪುರ-ಬೈಂದೂರು ನೇತೃತ್ವದಲ್ಲಿ ಇಲ್ಲಿನ ಶಾಸ್ತ್ರಿ ವೃತ್ತದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು. ಸೌಜನ್ಯ ಪ್ರಕರಣವನ್ನು ಕೇಂದ್ರ ಒಪ್ಪಿಸಿ ರಾಜ್ಯ ಸರ್ಕಾರ ಈ ಪ್ರಕರಣದಿಂದ ಕೈ ತೊಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದು ರಾಜ್ಯ ಸರ್ಕಾರದ ಮೈಂಡ್ ಗೇಮ್, ಸೇಫ್ ಗೇಮ್. ಯಾವ ಸರ್ಕಾರ ಏನೇ ಈ ಪ್ರಕರಣದಲ್ಲಿ ಆಟ ಆಡಿದರೂ ನ್ಯಾಯ ಸಿಗುವ ತನಕ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.

ನಾನು 11 ಹೋರಾಟ ಮಾಡುತ್ತಿದ್ದೇನೆ. ಮುಂದೆ ಎಷ್ಟು ಹೋರಾಟ ಮಾಡುವುದಕ್ಕೂ ನಾನು ಸಿದ್ದ. ನನಗೆ ವೇದಿಕೆಯಲ್ಲಿ ಮಾತನಾಡುವ ತೀಟೆಯಲ್ಲ, ಹೆಣ್ಣು ಮಗುವಿಗೆ ನ್ಯಾಯ ಕೊಡುವುದಷ್ಟೇ ನನ್ನ ಗುರಿ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ ಹೊರ ಹಾಕಿದರು.

ಸೆ.3ರಂದು ಬೆಳ್ತಂಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಸೇರಲಿದ್ದಾರೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಆರೋಪಿಗಳನ್ನು ರಕ್ಷಣೆ ಮಾಡಿದವರಿಗೂ ಶಿಕ್ಷೆಯಾಗಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು.

ಸೌಜನ್ಯ ತಾಯಿ ಕುಸುಮಾವತಿ ಮಾತನಾಡಿ, ನನ್ನ ಮಗಳಿಗಾಗಿ ನ್ಯಾಯ ಕೊಡಿಸಿ ಎಂದು ಕೇಳುತ್ತಲೇ ಬಂದಿದ್ದೇನೆ. ಅತ್ಯಂತ ಘೋರವಾಗಿ ಅತ್ಯಾಚಾರವೆಸಗಿ ನನ್ನ ಮಗಳನ್ನು ಸಾಯಿಸಿದ ಪಾಪಿಗಳಿಗೆ ಶಿಕ್ಷೆಯಾಗಬೇಕು. ನ್ಯಾಯಕ್ಕಾಗಿ ಹೋರಾಟ ಮಾಡಿದ್ದಕ್ಕಾಗಿ ಬೆದರಿಕೆಗಳನ್ನು ಎದುರಿಸಿ ಸಾಕಾಯ್ತು. ಇನ್ನಾದರೂ ಸರ್ಕಾರ ನ್ಯಾಯ ಒದಗಿಸಿ ಕೊಡುವ ಮನಸ್ಸು ಮಾಡಲಿ ಎಂದರು.

ಕಾರ್ಯಕ್ರಮಕ್ಕೂ ಮೊದಲು ನೆಹರು ಮೈದಾನದಿಂದ ಬೃಹತ್ ಮೆರವಣಿಗೆ ನಡೆಯಿತು. ಸುಮಾರು ಐದು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

Scroll to Top