ಉಡುಪಿ, ಆ.26: ಚಂದ್ರಯಾನ- 3 ಯಶಸ್ವಿಯಾಗಿದ್ದು, ಇಸ್ರೋ ವಿಜ್ಞಾನಿಗಳ ತಂಡಕ್ಕೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
ಉಪಗ್ರಹ ಉಡಾವಣೆ ಮಾಡಿದ ತಂಡದಲ್ಲಿ ಬಡತನದಿಂದ ಬಂದ ಸರ್ಕಾರಿ ಶಾಲೆಯಲ್ಲಿ ಓದಿದ ವಿಜ್ಞಾನಿಗಳು ಕೆಲಸ ಮಾಡಿರುವುದು ಇದರ ಮತ್ತಷ್ಟು ವಿಶೇಷತೆ.
ಉಡುಪಿಯ ಜಿಲ್ಲೆಯ ಕುಂದಾಪುರ ಸಮೀಪದ ಸಾಲಿಗ್ರಾಮದ ಪಾರಂಪಳ್ಳಿ ಮೂಲದ ಸೌಭಾಗ್ಯ ಐತಾಳ್ ಚಂದ್ರಯಾನ – 3 ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಇಸ್ರೋ ಸಂಸ್ಥೆಯ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ ಯುವ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೃಷಿಕರಾಗಿರುವ ರಾಘವೇಂದ್ರ ಐತಾಳ್ ಮತ್ತು ಮಹಾಲಕ್ಷ್ಮಿ ದಂಪತಿಯ ಪುತ್ರಿಯಾಗಿರುವ ಸೌಭಾಗ್ಯ ಚಿತ್ರಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನ ಕೋಟದ ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಪಡೆದಿದ್ದಾರೆ.
ಬಡತನದ ಕುಟುಂಬದಿಂದ ಬಂದ ಸೌಭಾಗ್ಯ ಅವರು ಸರಕಾರಿ ಶಾಲೆಯಲ್ಲಿ ಓದಿ ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ.
ಮಣಿಪಾಲ ಎಂ.ಐ.ಟಿ ಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ, ರಾಜಸ್ಥಾನದ ಪಿಲಾನಿಯಲ್ಲಿರುವ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಸ್ನಲ್ಲಿ ಎಂಟೆಕ್ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿ,ವಿದ್ಯಾರ್ಥಿಗಳಿಗಾಗಿ ಹಲವಾರು ವೈಜ್ಞಾನಿಕ ಲೇಖನಗಳನ್ನು ಬರೆದಿರುವ ಸೌಭಾಗ್ಯ ಐತಾಳ್ ಅವರು ಧೂಮಕೇತುಗಳು ಬಾಹ್ಯಾಕಾಶದ ಅನಿರೀಕ್ಷಿತ ಅತಿಥಿಗಳು ಎಂಬ ವಿಚಾರದಲ್ಲಿ ಕನ್ನಡದಲ್ಲಿ ಕೃತಿಯನ್ನು ಕೂಡ ರಚಿಸಿದ್ದಾರೆ.