ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಚಿನ್ನ ಗೆದ್ದ ನೀರಜ್ – ಮತ್ತೊಂದು ‌ಇತಿಹಾಸ ನಿರ್ಮಿಸಿದ ‘ಚಿನ್ನದ ಹುಡುಗ’

ನವದೆಹಲಿ : ಹಂಗೇರಿಯ ಬುಡಾಪೆಸ್ಟ್ ನಲ್ಲಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2023 ರಲ್ಲಿ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಅರ್ಹತಾ ಸುತ್ತಿನಲ್ಲಿ ನೀರಜ್ ಮೊದಲ ಪ್ರಯತ್ನದಲ್ಲಿ 88.77 ಮೀಟರ್ ದೂರ ಎಸೆದು ಫೈನಲ್ ಪ್ರವೇಶಿಸಿದ್ದರು. ಫೈನಲ್ ನಲ್ಲಿ ಮೊದಲ ಪ್ರಯತ್ನ ವಿಫಲವಾಯಿತು. ಎರಡನೇ ಪ್ರಯತ್ನದಲ್ಲಿ ಅವರು 88.17 ಮೀಟರ್ ಎತ್ತರಕ್ಕೆ ಈಟಿಯನ್ನು ಎಸೆದರು.

ಬಳಿಕದ ಪ್ರಯತ್ನಗಳಲ್ಲಿ ನೀರಜ್ 86.32, 84.64, 87.73 ಮತ್ತು 83.98 ಮೀಟರ್ ಜಾವೆಲಿನ್ ಎಸೆದರು. ಭಾರತದ ಅಥ್ಲೀಟ್ ಕಿಶೋರ್ ಜೆನಾ 84.77 ಮೀಟರ್ ಎಸೆದು ಐದನೇ ಸ್ಥಾನ ಪಡೆದರೆ, ಡಿಪಿ ಮನು 84.14 ಮೀಟರ್ ಎಸೆದು ಆರನೇ ಸ್ಥಾನ ಪಡೆದರು. ಪಾಕಿಸ್ತಾನದ ಅರ್ಷದ್ ನದೀಮ್ 87.82 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದರು. ಜೆಕ್ ಗಣರಾಜ್ಯದ ಜಾಕೋಬ್ ವಡ್ಲೆಚ್ 86.67 ಮೀಟರ್ ಎಸೆದು ಕಂಚಿನ ಪದಕ ಗೆದ್ದರು.

ಪುರುಷರ 4*400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ 2.59.92 ಸೆಕೆಂಡುಗಳಲ್ಲಿ ಗುರಿ ತಲುಪಿ ಐದನೇ ಸ್ಥಾನ ಪಡೆಯಿತು. ಯುಎಸ್‌ಎ 2.57.31 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದುಕೊಂಡಿತು.

ಮಹಿಳೆಯರ 3000 ಸ್ಟೀಪಲ್ ಚೇಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಪಾರುಲ್ ಚೌಧರಿ 11 ನೇ ಸ್ಥಾನ ಪಡೆದರು. ಇದರಲ್ಲಿ ಯಾವುದೇ ಪದಕ ಇಲ್ಲದಿದ್ದರೂ ಇದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.

ನೀರಜ್ ಚೋಪ್ರಾ ಅವರ ಸಾಧನೆಯಿಂದಾಗಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಎಲ್ಲಾ ಮೂರು ಪದಕಗಳನ್ನು ಗೆದ್ದಂತಾಗಿದೆ. ಕಳೆದ ವರ್ಷ ಬೆಳ್ಳಿ ಗೆದ್ದ ನಂತರ ನೀರಜ್‌ಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇದು ಎರಡನೇ ಪದಕವಾಗಿದೆ.

ಇದಕ್ಕೂ ಮೊದಲು ಭಾರತದ ಅಂಜು ಬಾಬಿ ಜಾರ್ಜ್ ಅವರು 2003 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಲಾಂಗ್ ಜಂಪ್‌ಗಾಗಿ ಕಂಚಿನ ಪದಕವನ್ನು ಪಡೆದಿದ್ದರು.

You cannot copy content from Baravanige News

Scroll to Top