ತಿರುವನಂತಪುರಂನಲ್ಲಿ 60 ಎಲೆಕ್ಟ್ರಿಕ್ ಬಸ್‍ಗಳಿಗೆ ಚಾಲನೆ

ತಿರುವನಂತಪುರಂ : ಕೇಂದ್ರ-ರಾಜ್ಯ ಸರ್ಕಾರಗಳು ಜಂಟಿಯಾಗಿ ಕೆಎಸ್‍ಆರ್‍ಟಿಸಿ 60 ಸ್ವಿಪ್ಟ್ ಎಲೆಕ್ಟ್ರಿಕ್ ಬಸ್‍ಗಳನ್ನು ಬಿಡುಗಡೆ ಮಾಡಿದೆ.

ಆಧುನಿಕ ಸೌಲಭ್ಯಗಳಿರುವ ಎಲೆಕ್ಟ್ರಿಕ್ ಸ್ಮಾರ್ಟ್ ಬಸ್‍ಗಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದರು.

104 ಕೋಟಿ ವೆಚ್ಚದಲ್ಲಿ 113 ಎಲೆಕ್ಟ್ರಿಕ್ ಬಸ್‍ಗಳನ್ನು ಸಾರ್ವಜನಿಕ ಸಾರಿಗೆ ಇಲಾಖೆಗೆ ಹಸ್ತಾಂತರಿಸುವ ಅಂಗವಾಗಿ 60 ಬಸ್‍ಗಳಿಗೆ ಚಾಲನೆ ನೀಡಲಾಯಿತು.

ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ, ತಿರುವನಂತಪುರಂ ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ 60 ಎಲೆಕ್ಟ್ರಿಕ್ ಬಸ್‍ಗಳನ್ನು ಪ್ರಾರಂಭಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ.ಐಎಫ್ ಟಿ ಚಾಲಕರ ಠೇವಣಿ ಮೊತ್ತವನ್ನು ಬಳಸಿಕೊಂಡು ಪ್ರಾರಂಭಿಸಲಾದ ಹೈಬ್ರಿಡ್ ಸ್ಮಾರ್ಟ್ ಬಸ್ ಅನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಸ್ಮಾರ್ಟ್ ಸಿಟಿ ಚಟುವಟಿಕೆಗಳಿಗೆ ಹಣ ಮಂಜೂರು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಹೇಳಿದರು.

ಇದು ತಿರುವನಂತಪುರಂ ನಗರದ ಮುಖಛಾಯೆಯನ್ನು ಬದಲಾಯಿಸಬಹುದು. ಡೀಸೆಲ್ ವಾಹನಗಳನ್ನು ಹಂತಹಂತವಾಗಿ ರದ್ದುಪಡಿಸಿ ಹಸಿರು ವಾಹನಗಳಿಗೆ ಬದಲಾಯಿಸಲಾಗುವುದು ಎಂದು ಉದ್ಘಾಟನಾ ಭಾಷಣದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದರು. ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ 500 ಕೋಟಿ ರೂ. ನೀಡಿದೆ.

ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್, ಸಾರಿಗೆ ಸಚಿವ ಅಂತೋಣಿರಾಜು, ಆಹಾರ ಸಚಿವ ಜಿ.ಆರ್.ಅನಿಲ್, ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉದ್ಘಾಟನೆಯ ನಂತರ ಸಚಿವರು ಕಿಲ್ಲಿಪಾಲಂನಿಂದ ಸೆಕ್ರೆಟರಿಯೇಟ್‍ಗೆ ಎಲೆಕ್ಟ್ರಿಕ್ ಬಸ್‍ನಲ್ಲಿ ಪ್ರಯಾಣಿಸಿದರು.

Scroll to Top