ಕಾರವಾರದಲ್ಲಿ ಅತಿ ದೊಡ್ಡ ಬಂಗುಡೆ ಮೀನು ಪತ್ತೆ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಅಪರೂಪಕ್ಕೆ ವಿಶೇಷ ಮೀನುಗಳು ಸಿಗುವ ಮೂಲಕ ಅಚ್ಚರಿಯನ್ನು ಮೂಡಿಸುತ್ತವೆ. ಈ ಬಾರಿ ಕಾರವಾರದ ಅರಬ್ಬಿ ಸಮುದ್ರದಲ್ಲಿ ದೇಶದಲ್ಲೇ ಮೊದಲ ಬಾರಿ ಎಂದು ಹೇಳಲಾಗುತ್ತಿರುವ ಅತಿ ಉದ್ದದ ಹಾಗೂ ಹೆಚ್ಚು ತೂಕದ ಬಂಗುಡೆ ಮೀನು ಮೀನುಗಾರರ ಬಲೆಗೆ ಬಿದ್ದಿದೆ.

ಕಾರವಾರದ ಬೈತಖೋಲ್ ಬಂದರಿನಲ್ಲಿ ನವೀನ್ ಹರಿಕಾಂತ್ರ ಎಂಬುವವರಿಗೆ ಆಳ ಸಮುದ್ರ ಬಿಡ್ಡಬಲೆ ದೋಣಿಗೆ ಈ ಮೀನು ಸಿಕ್ಕಿದೆ. ಈ ಮೀನನ್ನು ವಿನಾಯಕ್ ಖರೀದಿಸಿ ಕಡಲ ವಿಜ್ಞಾನ ವಿಭಾಗದ ಕೇಂದ್ರಕ್ಕೆ ನೀಡಿದ್ದಾರೆ. ಈ ಮೀನು 19 ಇಂಚು ಉದ್ದ ಮತ್ತು 4.5 ಇಂಚು ಅಗಲ ಇದ್ದು, ಒಂದು ಕೆಜಿ ತೂಕವಿದೆ.

ಬಂಗುಡೆ ಮೀನು ಎನ್ನುವುದು ಮೀನುಗಳ 30 ಜಾತಿಗಳನ್ನು ಒಳಗೊಂಡಿರುವಂತಹ ಸಾಮಾನ್ಯ ಪದವಾಗಿದೆ. ಇದರಲ್ಲಿ ಹೆಚ್ಚಿನವುಗಳು ಸ್ಕಾಂಬ್ರಿಡೇಗೆ ಸೇರಿರುವವು. ವಿಶ್ವದ ಹೆಚ್ಚಿನ ಭಾಗಗಳಲ್ಲಿ ಮಾರ್ಕೆಲ್ ಮೀನನ್ನು ಬಂಗುಡೆ ಎಂದು ಕರೆಯಲಾಗುತ್ತದೆ.

ಬಂಗುಡೆ ಮೀನು ಹೆಚ್ಚಾಗಿ ಕರಾವಳಿ ಭಾಗದಲ್ಲಿ ಕಂಡುಬರುವುದು. ಇದು ಅಲ್ಲಿಯೇ ಮೊಟ್ಟೆಯನ್ನಿಡುವುದು ಮತ್ತು ಬೆಳೆಯುವುದು. ಇವುಗಳು ಹೆಚ್ಚಾಗಿ ಉಷ್ಣವಲಯ ಹಾಗೂ ಸಮಶೀತೋಷ್ಣವಲಯಗಳಲ್ಲಿ ಕಂಡುಬರುತ್ತವೆ. ಬಂಗುಡೆ ಮೀನುಗಳು ದೊಡ್ಡ ಪ್ರಮಾಣದಲ್ಲಿ ಸಿಗುವ ಕಾರಣದಿಂದಾಗಿ ಇದು ಮೀನುಗಾರರಿಗೆ ದೊಡ್ಡ ಮಟ್ಟದಲ್ಲಿ ಹಣವನ್ನು ಸಂಪಾದಿಸಿ ಕೊಡುತ್ತದೆ. ಈ ಕಾರಣದಿಂದಾಗಿ ಬಂಗುಡೆ ಮೀನು ತುಂಬಾ ಜನಪ್ರಿಯವಾಗಿದೆ. ಇದು ಉತ್ತರ ಅಮೆರಿಕದ ಆಹಾರದ ಪ್ರಮುಖ ಭಾಗವಾಗಿದೆ. 20 ಸೆ.ಮೀ.ನಿಂದ 200 ಸೆ.ಮೀ. ತನಕ ಇರುವಂತಹ ಈ ಮೀನುಗಳು ದೈಹಿಕವಾಗಿ ಬೇರೆ ಬೇರೆ ವಿನ್ಯಾಸ ಹೊಂದಿರುವುದು. ಆದರ ಇದು ಒಂದೇ ರೀತಿಯ ರುಚಿ ಹಾಗೂ ಉತ್ತಮ ಪೋಷಕಾಂಶಗಳನ್ನು ಹೊಂದಿರುತ್ತವೆ.

ಈ ಮೀನು ಹೆಚ್ಚು ಎಂದರೆ 300 ಗ್ರಾಂವರೆಗೆ ತೂಕವಿರುತ್ತದೆ. ಗಂಡು ಬಂಗುಡೆ 36 ಸೆಂ.ಮೀ, ಹೆಣ್ಣು ಬಂಗುಡೆ 42 ಸೆಂ.ಮೀ ಅತೀ ದೊಡ್ಡದು ಎಂದು ಭಾರತದಲ್ಲಿ ವರದಿಯಾಗಿತ್ತು. ಆದರೆ ಕಾರವಾರದಲ್ಲಿ ಸಿಕ್ಕ ಈ ಬಂಗುಡೆ 48 ಸೆಂ.ಮೀ. ಇದೆ ಹಾಗಾಗಿ ಇದು ದೇಶದಲ್ಲೇ ಅತಿ ದೊಡ್ಡ ಮೀನಾಗಿರಬಹುದು ಎಂದು ಕಾರವಾರದ ಕಡಲ ಜೀವಶಾಸ್ತ್ರ ವಿಭಾಗದ ಶಿವಕುಮಾರ್ ಹರಿಗಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Scroll to Top