ಕೊನೆ ಆಸೆಯಂತೆ ರಸಗುಲ್ಲಾ ನೀಡಿ ಬಾಲಕನ ಕೊಲೆಗೈದ ಕ್ಲಾಸ್‍ಮೇಟ್ಸ್!

ಕೋಲ್ಕತ್ತಾ : 8ನೇ ತರಗತಿ ವಿದ್ಯಾರ್ಥಿಯನ್ನು ಮೂರು ಮಂದಿ ಸಹಪಾಠಿಗಳೇ ಅಪಹರಣ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪವೊಂದು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಕೇಳಿಬಂದಿದೆ.

ಮೃತ ವಿದ್ಯಾರ್ಥಿಯ ಕುಟುಂಬದವರು ತಮ್ಮ ಮಗು ಕಾಣೆಯಾಗಿದೆ ಎಂದು ದೂರು ನೀಡಲು ಕೃಷ್ಣನಗರ ಪೊಲೀಸ್ ಠಾಣೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಶುಕ್ರವಾರ ಸೈಕಲ್ ತೆಗೆದುಕೊಂಡು ಗೆಳೆಯರನ್ನು ಭೇಟಿಯಾಗಲು ತೆರಳುವುದಾಗಿ ಹೇಳಿ ಹೋದವನು ಮತ್ತೆ ವಾಪಸ್ ಮನೆಗೆ ಬಂದಿಲ್ಲ ಎಂದು ಬಾಲಕನ ಪೋಷಕರು ತಿಳಿಸಿದ್ದಾರೆ. ದೂರಿನನ್ವಯ ಕೃಷ್ಣನಗರ ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಮೃತ ವಿದ್ಯಾರ್ಥಿಯ ಮೂವರು ಸಹಪಾಠಿಗಳನ್ನು ಬಂಧಿಸಿದ್ದಾರೆ.

ಬಂಧಿತ ವಿದ್ಯಾರ್ಥಿಗಳು ಗೇಮಿಂಗ್ ಲ್ಯಾಪ್‍ಟಾಪ್ ಖರೀದಿ ಮಾಡಲು ಮೃತನ ಕುಟುಂಬದಿಂದ ಮೂರು ಲಕ್ಷ ರೂಪಾಯಿಗಾಗಿ ಬೇಡಿಕೆ ಇಟ್ಟಿದ್ದರು. ಆದರೆ ಅಪಹರಣಕಾರರ ಬೇಡಿಕೆಯನ್ನು ಪೂರೈಸಲು ಕುಟುಂಬ ವಿಫಲವಾದಾಗ, ಅವರು ವಿದ್ಯಾರ್ಥಿಯ ಕತ್ತು ಹಿಸುಕಿ ಕೊಂದಿದ್ದಾರೆ. ಸಾಯಿಸುವುದಕ್ಕೂ ಮುನ್ನ ಅಪಹರಣಕಾರರು ಬಾಲಕನ ಬಳಿ ‘ನಿನ್ನ ಕೊನೆಯ ಆಸೆ ಏನು?’ ಎಂದು ಕೇಳಿದ್ದಾರೆ. ಅಂತೆಯೇ ಬಾಲಕನ ಆಸೆ ಪೂರೈಸಲು ರಸಗುಲ್ಲಾ ಮತ್ತು ತಂಪು ಪಾನೀಯಗಳನ್ನು ನೀಡಿದ್ದಾರೆ. ಕೊಲೆಯ ಬಳಿಕ ಆರೋಪಿಗಳು ಬಾಲಕನ ಶವವನ್ನು ಚೀಲದಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಬಾಲಾಪರಾಧಿ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಬಳಿಕ ಸ್ಥಳೀಯರು ಪ್ರತಿಭಟನೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

You cannot copy content from Baravanige News

Scroll to Top