ಮೈಸೂರು, ಆ.30: ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ‘ಗೃಹ ಲಕ್ಷ್ಮಿ’ ಯೋಜನೆಗೆ ಬುಧವಾರ ವಿದ್ಯುಕ್ತ ಚಾಲನೆ ನೀಡಲಾಯಿತು.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 1.10 ಕೋಟಿ ಫಲಾನುಭವಿಗಳು 2000 ರೂಪಾಯಿ ಯೋಜನೆಯ ಲಾಭ ಪಡೆದುಕೊಂಡರು. ಸಮಾರಂಭದಲ್ಲಿ ಹಾಜರಿದ್ದ ಗಣ್ಯರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಸ್ವಾಗತಿಸಿದರು.
ಸನ್ಮಾನ್ಯ ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ, ಜಗತ್ತಿನಲ್ಲಿ ವಿಶಿಷ್ಠವಾದ ಇಂತಹ ಯೋಜನೆಯನ್ನು ನನ್ನ ಇಲಾಖೆಯಿಂದ ಜಾರಿಗೊಳಿಸುತ್ತಿರುವುದು ನನಗೆ ಖುಷಿ ತಂದಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಈ ಒಂದು ಬೃಹತ್ ಕಾರ್ಯಕ್ರಮದ ವೇದಿಕೆಯಿಂದ ನನ್ನ ಗ್ರಾಮೀಣ ಕ್ಷೇತ್ರದ ಜನರನ್ನು ನಾನು ಸ್ಮರಿಸಿಕೊಳ್ಳುತ್ತೇನೆ. ಅವರ ಆಶಿರ್ವಾದದಿಂದಾಗಿಯೇ ಇಂದು ನಾನು ಈ ಮಟ್ಟಕ್ಕೆ ಬರಲು ಅವಕಾಶವಾಗಿದೆ. ಇಡೀ ಕ್ಷೇತ್ರದ ಜನರು ಮನೆ ಮಗಳು ಎಂದೇ ನನ್ನನ್ನು ಕರೆಯುತ್ತಾರೆ. ತಮ್ಮ ಕುಟುಂಬದ ಸದಸ್ಯೆ ಎಂದೇ ಪರಿಗಣಿಸುತ್ತಾರೆ.
ನಾನು ಕಳೆದ ವಿಧಾನಸಭೆ ಚುನಾವಣೆಗೆ ಮೊದಲು ಕ್ಷೇತ್ರದಲ್ಲಿ ಓಡಾಡುತ್ತಿರುವಾಗ ಕ್ಷೇತ್ರದ ಜನರು, ವಿಶೇಷವಾಗಿ ಮಹಿಳೆಯರು ಕಣ್ಣೀರು ಹಾಕುತ್ತಿದ್ದರು. ಬೆಲೆ ಏರಿಕೆಯಿಂದ ಅವರೆಲ್ಲ ತತ್ತರಿಸಿ ಹೋಗಿದ್ದರು. ಅಕ್ಕ, ಸಿಲಿಂಡರ್ ಬೆಲೆ ಏರಿದೆ, ವಿದ್ಯುತ್ ಬೆಲೆ ಏರಿದೆ, ದಿನಸಿ ಸಾಮಗ್ರಿಗಳ ಬೆಲೆ ಏರಿದೆ, ಪೆಟ್ರೋಲ್ ಬೆಲೆ ಏರಿದೆ.
ಸಂಸಾರ ನಡೆಸಿಕೊಂಡು ಹೋಗುವುದೇ ಕಷ್ಟವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರು. ಅವರನ್ನು ಸಮಾಧಾನ ಪಡಿಸುವ ಶಕ್ತಿ ಅಂದು ನನಗಿರಲಿಲ್ಲ. ಆದರೆ, ಮುಂದೆ ಖಂಡಿತ ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತದೆ, ಇವರೆಲ್ಲರ ಕಣ್ಣೀರು ಒರೆಸುತ್ತೇನೆ ಎನ್ನುವ ಆತ್ಮ ವಿಶ್ವಾಸ ನನ್ನಲ್ಲಿತ್ತು.
ಇದು ನನ್ನ ಗ್ರಾಮೀಣ ಕ್ಷೇತ್ರ ಮಾತ್ರವಲ್ಲ, ಇಡೀ ರಾಜ್ಯದ ಮಹಿಳೆಯರ ಸಮಸ್ಯೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹಾಗಾಗಿ ಇದಕ್ಕೆಲ್ಲ ಪರಿಹಾರವಾಗಿ, ಜನರ ಕಣ್ಣೀರು ಒರೆಸುವ ಸಲುವಾಗಿ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು.
ಇದು ಕೇವಲ ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಮಾಡಿರುವ ಘೋಷಣೆಯಾಗಿರಲಿಲ್ಲ, ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ನುಡಿದಂತೆ ನಡೆಯುವ ಪಕ್ಷ ಎನಿಸಿಕೊಂಡಿದೆ. ಇದನ್ನು ಅರಿತಿರುವ ಜನರು ತಮ್ಮ ಸಮಸ್ಯೆಗೆ ಕಾಂಗ್ರೆಸ್ ನಿಂದ ಖಂಡಿತ ಪರಿಹಾರ ಸಿಗುತ್ತದೆ ಎಂದು ತಿಳಿದು ನಮ್ಮನ್ನು ಅತೀ ದೊಡ್ಡ ಬಹುಮತದಿಂದ ಅಧಿಕಾರಕ್ಕೆ ತಂದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ, ಮೊದಲ ಸಚಿವ ಸಂಪುಟ ಸಭೆಯಲ್ಲೇ ನಾವು ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ತಾತ್ವಿಕ ಒಪ್ಪಿಗೆ ನೀಡುವ ಮೂಲಕ ನುಡಿದಂತೆ ನಡೆದಿದ್ದೇವೆ. ಜನರ ಮುಖದಲ್ಲಿ ಅಷ್ಟರ ಮಟ್ಟಿಗೆ ನಗು ತರಿಸಿದ್ದೇವೆ ಎಂದು ಹೆಬ್ಬಾಳ್ಕರ್ ಹೇಳಿದರು.
ಈಗಾಗಲೆ 3 ಗ್ಯಾರಂಟಿ ಯೋಜನೆಗಳ ಫಲ ಜನರಿಗೆ ಸಿಗುತ್ತಿದೆ. ಇಂದಿನಿಂದಲೇ ನಾಲ್ಕನೇ ಗ್ಯಾರಂಟಿ ಯೋಜನೆ ಕೂಡ ಪ್ರತಿ ಮನೆ ಮನೆಯನ್ನು ತಲುಪುತ್ತಿದೆ. ನಮ್ಮ ತಾಯಂದಿರ ಮುಖದಲ್ಲಿನ ನಗುವನ್ನು ನೋಡುವ ಈ ಕ್ಷಣಕ್ಕಾಗಿ ನಾನು ಹಲವು ದಿನಗಳಿಂದ ಕಾಯುತ್ತಿದ್ದೆ ಎಂದರು.
ನಾನು ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಬೇಕೆಂದು ಹಗಲು, ರಾತ್ರಿ ಶ್ರಮಿಸಿದ್ದೇನೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಚಿವಸಂಪುಟದ ಎಲ್ಲ ಸಹೋದ್ಯೋಗಿಗಳ ಮಾರ್ಗದರ್ಶನ, ನನ್ನ ಇಲಾಖೆಯ ಎಲ್ಲ ಅಧಿಕಾರಿಗಳ ಶ್ರಮದಿಂದಾಗಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಕಾರದಿಂದಾಗಿ ಅದು ಯಶಸ್ವಿಯಾಗಿದೆ ಎಂದು ಹೇಳಿದರು.
ಈಗ ಆ ಕ್ಷಣ ಬಂದಿದೆ. ತಾಯಿ ಚುಮುಂಡೇಶ್ವರಿ ಸನ್ನಿಧಾನದಲ್ಲಿ, ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ, ಜಗತ್ತಿನಲ್ಲೇ ವಿಶಿಷ್ಟವಾದ ಇಂತಹ ಯೋಜನೆಯನ್ನು ನನ್ನ ಇಲಾಖೆಯಿಂದ ಜಾರಿಗೊಳಿಸುತ್ತಿರುವುದು ನನಗೆ ಖುಷಿಯನ್ನು ಇಮ್ಮಡಿಗೊಳಿಸಿದೆ. ಇದನ್ನು ನನ್ನ ಜೀವನದ ಸಾರ್ಥಕ ಕ್ಷಣ ಎಂದೇ ಭಾವಿಸುತ್ತೇನೆ ಎಂದರು.
ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ, ಮಕ್ಕಳಿಗಾಗಿ, ಹಿರಿಯ ನಾಗರಿಕರಿಗಾಗಿ, ವಿಶೇಷ ಚೇತನರಿಗಾಗಿ ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಯೋಚನೆಗಳನ್ನು ಹೊಂದಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಸಹಕಾರ, ಮಾರ್ಗದರ್ಶನ ಇರಲಿ ಎಂದು ಕೋರಿದರು.
ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪರಮೇಶ್ವರ್, ಮಹದೇವಪ್ಪ, ಕೆ.ವೆಂಕಟೇಶ್, ಚಲುವರಾಯಸ್ವಾಮಿ, ಬೋಸರಾಜು, ಸತೀಶ್ ಜಾರಕಹೊಳಿ, ಕೆ.ಎನ್.ರಾಜಣ್ಣ, ಕೃಷ್ಣ ಬೈರೇಗೌಡ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಏಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸೇರಿದಂತೆ ಮೈಸೂರು, ಮಂಡ್ಯ, ಹಾಸನ,ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಶಾಸಕರು ಉಪಸ್ಥಿತರಿದ್ದರು.