ಮಲ್ಪೆ, ಸೆ.03: ಬೋಟಿನಲ್ಲಿದ್ದ ಮೀನಿನಿಂದ ಹೊರ ಸೂಸಿದ ವಿಷ ಅನಿಲದ ಪರಿಣಾಮ ಜೀವ ರಕ್ಷಕ ಈಶ್ವರ ಮಲ್ಪೆ ಸೇರಿದಂತೆ ಮತ್ತೆ ಇಬ್ಬರು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕಳೆದ ರಾತ್ರಿ ಮಲ್ಪೆ ಬಂದರಿನಲ್ಲಿ ನಡೆದಿದೆ.
ಮೀನುಗಾರಿಕೆ ಮುಗಿಸಿ ಮಲ್ಪೆ ಬಂದರಿಗೆ ಆಗಮಿಸಿದ್ದ ಬೋಟಿನಿಂದ ಮೀನು ಖಾಲಿ ಮಾಡಲು ಮೀನುಗಾರರೊಬ್ಬರು ಬೋಟಿನ ಸ್ಟೋರೇಜ್ ರೂಮಿಗೆ ಇಳಿದರು ಎನ್ನಲಾಗಿದೆ. ಈ ವೇಳೆ ಅವರು ಮೀನಿನ ವಿಷ ಅನಿಲ ಮಿಥೇನಿಯಂ ಹೊರ ಬಂದು ಅಲ್ಲೇ ಅಸ್ವಸ್ಥಗೊಂಡು ಬಿದ್ದರು.
ಕೂಡಲೇ ಜೀವ ರಕ್ಷಕ ಈಶ್ವರ ಮಲ್ಪೆ ಅಸ್ವಸ್ಥಗೊಂಡು ಬಿದ್ದವರನ್ನು ರಕ್ಷಿಸಲು ಮುಂದಾಗಿದ್ದು ಇದರಿಂದ ಈಶ್ವರ ಮಲ್ಪೆ ಕೂಡ ವಿಷ ಅನಿಲದಿಂದ ಉಸಿರು ಕಟ್ಟಿ ಅಸ್ವಸ್ಥರಾಗಿ ಬೋಟ್ನಿಂದ ಮೇಲೆ ಬಂದಿದ್ದ ಇವರು ಪ್ರಜ್ಞೆ ತಪ್ಪಿದ್ದರು.
ಬಳಿಕ ಮತ್ತೆ ಚೇತರಿಕೆ ಕಂಡ ಈಶ್ವರ ಮಲ್ಪೆಯವರು ಮೀನುಗಾರರ ಬೋಟ್ನ ಒಳಗೆ ಜೀವನ್ಮಾರಣ ಸ್ಥಿತಿಯಲ್ಲಿ ಉಸಿರಾಟದ ತೊಂದರೆ ಒದ್ದಾಡುತ್ತಿದ್ದನ್ನು ಕಂಡು ತನ್ನ ಪ್ರಾಣವನ್ನು ಲೆಕ್ಕಿಸದೆ ಮತ್ತೆ ಬೋಟ್ನ ಒಳಗೆ ಹೋಗಿ ಮೀನುಗಾರರನ್ನು ರಕ್ಷಿಸಿದರು.
ಬಳಿಕ ತಕ್ಷಣ ಇವರಿಬ್ಬರನ್ನು ಆಂಬುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಮೀನುಗಾರ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದು ಚಿಕಿತ್ಸೆ ಮುಂದುವರಿದಿದೆ.ಈಶ್ವರ ಮಲ್ಪೆ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.