ಉಡುಪಿ, ಸೆ.04: ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ಭರದಿಂದ ಸಾಗುತ್ತಿದ್ದು, ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುವ ಲಕ್ಷಾಂತರ ಉಂಡೆ, ಚಕ್ಕುಲಿ ತಯಾರಿ ಸೋಮವಾರದಿಂದ ಪ್ರಾರಂಭವಾಗಿದೆ.
ರಾಜ್ಯದ ವಿವಿಧ ಭಾಗದಿಂದ ಶ್ರೀಕೃಷ್ಣಾಷ್ಟಮಿ ಉತ್ಸವಕ್ಕೆ ಲಕ್ಷಾಂತರ ಜನ ಆಗಮಿಸುತ್ತಾರೆ. 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 7ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದೆ.
ಶ್ರೀ ಕೃಷ್ಣಮಠದಿಂದ ಭಕ್ತರಿಗೆ ಹಾಗೂ ಚಿಣ್ಣರ ಸಂತರ್ಪಣೆಯ ಶಾಲಾ ಮಕ್ಕಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಉಂಡೆ, ಚಕ್ಕುಲಿ ಪ್ರಸಾದವನ್ನು ವಿಶೇಷವಾಗಿ ಕಳುಹಿಸಿಕೊಡಲಾಗುತ್ತದೆ.
ಸೋಮವಾರ ಬೆಳಗ್ಗೆ ಅನ್ನಬ್ರಹ್ಮ ಹಾಗೂ ಮಧ್ವಾಂಗಣದಲ್ಲಿ 50ಕ್ಕೂ ಹೆಚ್ಚು ಬಾಣಸಿಗರು ಚಕ್ಕುಲಿ, ಗುಂಡಿಟ್ಟು ಲಾಡು, ಅರಳುಂಡೆ, ನೆಲಕಡ್ಲೆ ಲಾಡು, ಹೆಸರಿಟ್ಟು ಲಾಡು, ಕಡ್ಲೆ ಹಾಗೂ ಎಳ್ಳು ಉಂಡೆ, ಶುಂಠಿ, ಗೋಡಂಬಿ ಲಾಡು ತಯಾರಿಸಲಿದ್ದಾರೆ.
ಅಷ್ಟಮಿಯಂದು ಕೃಷ್ಣ ದೇವರಿಗೆ ಸಮರ್ಪಿಸಲು ಮಡಿಯಲ್ಲಿ ತಯಾರಿಸುವ ಲಡ್ಡಿಗೆ ಮುಹೂರ್ತ 6ರಂದು ಬೆಳಗ್ಗೆ 9.30ಕ್ಕೆ ಭೋಜನ ಶಾಲೆಯಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.