ಕರಾವಳಿಯಲ್ಲಿ ಬಂಪರ್ ಮತ್ಸ್ಯ ಬೇಟೆ- ಮಳೆಯಿಂದಾಗಿ ಸಮುದ್ರದಲ್ಲಿ ಹೇರಳ ಮೀನು

ಕಾರವಾರ: ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಕೈಕೊಟ್ಟಿದ್ದ ವರುಣ ಇದೀಗ ಮತ್ತೆ ಪ್ರಾರಂಭವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರರಿಗೆ ಮೀನುಗಳ ಬಂಪರ್ ಲಾಟರಿ ಹೊಡೆದಿದೆ.

ಹೌದು. ರಾಜ್ಯದಲ್ಲಿ ಇದೀಗ ಹವಾಮಾನ ಬದಲಾವಣೆಯಾಗಿ ಹಲವು ಜಿಲ್ಲೆಗಳಲ್ಲಿ ಅಬ್ಬರದ ಮಳೆ ಸುರಿದರೆ ಕರಾವಳಿಯಲ್ಲಿ ಬಿಸಿಲು ಮತ್ತು ಮಳೆಯ ಹವಾಮಾನ ವೈಪರಿತ್ಯ. ಇದೀಗ ಮೀನುಗಾರನಿಗೆ ಲಾಭ ತಂದುಕೊಡುತ್ತಿದೆ. ಜಿಲ್ಲೆಯ ಕರಾವಳಿ ಭಾಗದಲ್ಲಿ ಬೆಳಗ್ಗೆ ಬಿಸಿಲಿದ್ದರೆ ಸಂಜೆಯಾಗುತಿದ್ದಂತೆ ಮಳೆ ಬೀಳುತ್ತಿದೆ. ಇದರಿಂದಾಗಿ ಅರಬ್ಬಿ ಸಮುದ್ರ ಭಾಗದಲ್ಲಿ ಮೀನುಗಳು ಆಹಾರ ಅರಸಿ ಕರ್ನಾಟಕದ ಕರಾವಳಿಯತ್ತ ಹೆಚ್ಚು ಆಗಮಿಸುತ್ತಿವೆ.


100 ನಾಟಿಕನ್ ಮೈಲುದೂರದವರೆಗೆ ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರಿಗೆ ಹೆಚ್ಚು ಮೀನುಗಳು ದೊರೆಯುತ್ತಿವೆ. ಜಿಲ್ಲೆಯ ಕಾರವಾರದ ಬೈತಖೋಲ್ ಬಂದರಿನಲ್ಲಿ ಪೇಡಿ ಮೀನುಗಳು ಅತೀ ಹೆಚ್ಚು ದೊರೆತರೇ ಅತೀ ದುಬಾರಿ ಬೆಲೆಯ ಪ್ಲಗ್ ಪಾಂಪ್ಲೆಟ್, ಬಾಂಗಡೆ, ಇಷ್ವಾಣ್ (ಕಿಂಗ್ ಫಿಷ್) ಸೇರಿದಂತೆ ವಿವಿಧ ಜಾತಿಯ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿದ್ದು ಕಳೆದ ಎರಡು ವರ್ಷದಿಂದ ಆದಾಯವಿಲ್ಲದೇ ಮತ್ಸ್ಯ ಕ್ಷಾಮ ಎದುರಿಸುತ್ತಿರುವ ಮೀನುಗಾರರಿಗೆ ಇದೀಗ ಬರಪೂರ ಲಾಭ ತಂದುಕೊಡುತ್ತಿದೆ.


ಕರಾವಳಿಯಲ್ಲಿ ಈ ಹಿಂದೆ ಮೀನುಗಾರಿಕೆಗೆ ತೆರಳುತ್ತಿದ್ದ ಮೀನುಗಾರರಿಗೆ ಜಲ್ಲಿ ಫಿಷ್ ಗಳೇ ಹೆಚ್ಚು ಸಿಗುತ್ತಿದ್ದು ಇದರಿಂದ ನಷ್ಟಕ್ಕೆ ಮೀನುಗಾರರು ತುತ್ತಾಗಿದ್ದರು. ಆದರೆ ಕಳೆದ ಎರಡು ದಿನದಿಂದ ಹವಾಮಾನ ಬದಲಾವಣೆ ಮೀನುಗಳು ಅರಬ್ಬಿ ಸಮುದ್ರದಲ್ಲಿ ಹೇರಳವಾಗಿ ದೊರೆಯುತ್ತಿದ್ದು, ಇದೀಗ ಮೀನುಗಾರರು ಸಹ ಸಂತಸ ವ್ಯಕ್ತಪಡಿಸಿದ್ದು, ಪೇಡಿ ಮೀನುಗಳು ಜಿಲ್ಲೆಯ ಬಹುತೇಕ ಬಂದರಿನಲ್ಲಿ ಹೆಚ್ಚು ಸಿಗುತ್ತಿವೆ. ಇವುಗಳು ಚಿಕ್ಕದಾಗಿರುವುದರಿಂದ ಫಿಷ್ ಮಿಲ್ ಗೆ ಕಳುಹಿಸಲಾಗುತ್ತಿದೆ. ಇವುಗಳ ಬೆಲೆ ಕೆಜಿ ಒಂದಕ್ಕೆ 15 ರಿಂದ 20 ಇದೆ. ಆದರೆ ಇದರ ಜೊತೆಗೆ ಪ್ಲಗ್ ಪಾಂಪ್ಲೆಟ್, ಇಷ್ವಾಣ್ (ಕಿಂಗ್ ಫಿಷ್) ಗಳು ದೊರೆಯುತ್ತಿದ್ದು ಕೆಜಿ ಒಂದಕ್ಕೆ 400 ರಿಂದ 450 ಇದ್ದು ಇದು ಲಾಭ ತರುತ್ತಿದ್ದು ವಿದೇಶಕ್ಕೂ ರಫ್ತಾಗುತ್ತಿವೆ. ಹೀಗಾಗಿ ಇದೇ ವಾತಾವರಣ ಇದ್ದರೇ ಮೀನುಗಾರರಿಗೆ ಉತ್ತಮ ಲಾಭ ನಿರೀಕ್ಷಿಸಬಹುದು. ಒಂದು ವೇಳೆ ಸಮುದ್ರದಲ್ಲಿ ಚಂಡಮಾರುತ ಎದ್ದರೆ ಮೀನುಗಾರರಿಗೆ ನಷ್ಟವಾಗುತ್ತೆ ಎಂದು ಮೀನುಗಾರರು ಹೇಳುತ್ತಾರೆ.

ಒಂದೆಡೆ ರೈತರು ಮಳೆಯಿಂದಾಗಿ ತಮ್ಮ ಫಸಲನ್ನು ಉಳಿಸಿಕೊಂಡರೇ ಇತ್ತ ಕರಾವಳಿ ಭಾಗದಲ್ಲಿ ಮೀನುಗಾರರು ಬಂಪರ್ ಮೀನುಗಳ ಭೇಟೆಯಲ್ಲಿ ನಿರತವಾಗಿದ್ದು ಕೈತುಂಬಾ ಕಾಸು ಮಾಡುತ್ತಿದ್ದಾರೆ.

Scroll to Top