ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ; ರಕ್ಷಿತ್ ಶೆಟ್ಟಿಯ ಭರ್ಜರಿ ಟೈಗರ್ ಡ್ಯಾನ್ಸ್ ; ನೋಡ ನೋಡುತ್ತಲೇ ಆವೇಶಕ್ಕೊಳಗಾದ ಹುಲಿ ವೇಷಧಾರಿ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ. ವಿಟ್ಲ ಪಿಂಡಿ ಉತ್ಸವ. ಹೀಗೆ ಎರಡು ದಿನಗಳ‌ ಕಾಲ ಕೃಷ್ಣನೂರು ಉಡುಪಿಯಲ್ಲಿ ಸಂಭ್ರಮ ಸಡಗರ ಮೇಳೈಸಿತ್ತು. ಕೃಷ್ಣ ಜನ್ಮಾಷ್ಟಮಿಗೆ ಹುಲಿವೇಷ ಸಹಿತ ನೂರಾರು ವೇಷಗಳು ಸಾಕ್ಷಿಯಾದವು. ಸಾವಿರಾರು ಭಕ್ತರು ಲೀಲೋತ್ಸವ ಕಂಡು ಪುನೀತರಾದರು.

ಕೃಷ್ಣ ನಗರ ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಅಚ್ಯುತಂ ಕೇಶವಂ.. ರಾಮ ನಾರಾಯಣಂ.. ಕೃಷ್ಣ ದಾಮೋದರಂ.. ವಾಸುದೇವಂ ಹರಿಮ್.. ಶ್ರೀಧರಂ ಮಾಧವಂ.. ಗೋಪಿಕಾ ವಲ್ಲಭಂ.. ಜಾನಕೀ ನಾಯಕಂ.. ರಾಮಚಂದ್ರಂ ಭಜೇ.. ಹರೇ ರಾಮ್ ಹರೇ ರಾಮ್.. ರಾಮ್ ರಾಮ್ ಹರೇ ಹರೇ.. ಹರೇ ಕೃಷ್ಣ ಹರೇ ಕೃಷ್ಣ.. ಕೃಷ್ಣ ಕೃಷ್ಣ ಹರೇ ಹರೇ.. ಪುರುಷೋತಮನು ಧರೆಗಿಳಿದು ಬಂದ ದಿನದಂದು ಈ ಚರಣಗಳು ದೇಶದೆಲ್ಲೆಡೆ ಮೊಳಗಿತ್ತು. ಅದನ್ನ ಶ್ರೀಕೃಷ್ಣ ಜನ್ಮಾಷ್ಟಮಿ ಅಂತನೂ ಆರಾಧಿಸಿ, ಮುಕುಂದನ ಆರಾಧನೆಯಲ್ಲಿ ಭಕ್ತ ಗಣ ಮೈಮರೆತ್ತಿತ್ತು. ಕಡೆಗೋಲು ಶ್ರೀಕೃಷ್ಣನ ನಗರಿ ಉಡುಪಿ ಧರೆಗಿಳಿದ ಸ್ವರ್ಗದಂತೆ ಭಾಸವಾಗ್ತಿತ್ತು.

ಮಥುರೆಯ ಬೀದಿಯಾಗಿತ್ತು. ಅಷ್ಟಮಠಗಳ ಅಂಗಳ ದ್ವಾರಕೆಯ ಸಂಭ್ರಮವನ್ನ ನೆನಪಿಸುತ್ತಿತ್ತು. ಕೃಷ್ಣ ಹುಟ್ಟಿದ ಮರುದಿನ ಭಕ್ತ ಕೋಟಿಯ ಸಂಭ್ರಮ ಎಷ್ಟಿತ್ತು ಎಂಬುದನ್ನು ಉಡುಪಿಯ ಕೃಷ್ಣಮಠದ ರಥ ಬೀದಿ ನೆನಪು ಮಾಡಿಕೊಟ್ತು. ಕೃಷ್ಣ ಜನ್ಮಾಷ್ಟಮಿಯಂದು ರಥ ಬೀದಿಯ ತುಂಬಾ ಮುದ್ದುಕೃಷ್ಣರ ಕಲರವ ಮೇಳೈಸಿದೆ. ಸಾವಿರಾರು ಮಕ್ಕಳು ಕೃಷ್ಣನ ವೇಷ ಧರಿಸಿ ಕೃಷ್ಣಮಠದ ಪರಿಸರದಲ್ಲಿ ಕಾಣಿಸಿಕೊಂಡರು.

ವಿಟ್ಲ ಪಿಂಡಿ ಉತ್ಸವಕ್ಕೆ ಅಂತ ಮಕ್ಕಳು ಶ್ರೀಕೃಷ್ಣನ ವೇಷ ಹಾಕಿದ್ರೆ, ಅತ್ತ ನೂರಾರು ಕಲಾವಿದರು ಹುಲಿ ವೇಷದಾರಿಗಳಾಗಿ ಹೆಜ್ಜೆ ಹಾಕಿದ್ದರು. ಭಗವಾನ್ ಶ್ರೀಕೃಷ್ಣನ ವೈಭವದ ಮೆರವಣಿಗೆ ಮುಂದೆ ಕುಣಿದ ದೃಶ್ಯಗಳು ಮೈಮನ ರೋಮಾಂಚನಗೊಳಿಸ್ತು. ರಥ ಬೀದಿಗೆ ಉತ್ಸವ ಒಂದು ಸುತ್ತು ಬಂದ ನಂತರ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನ ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಲಾಯ್ತು. ಹುಲಿ ಕುಣಿತ ಎಂದ್ರೆ ಎಲ್ಲರಿಗೂ ಇಷ್ಟ. ಒಂದೆರೆಡು ಸ್ಟೆಪ್ ಹಾಕೋಣ ಅನಿಸಿ ಬಿಡುವ ಕುಣಿತ.

ಹುಲಿ ವೇಷ ಅಥವಾ ಹುಲಿ ಕುಣಿತ ಕರಾವಳಿ ಪರಂಪರೆಯ ಹೆಜ್ಜೆಗಳು. ಕರಾವಳಿಯ ಪ್ರಸಿದ್ಧ ನೃತ್ಯ ಪ್ರಕಾರ ಈ ಹುಲಿ ಕುಣಿತ ಸಂಸ್ಕೃತಿಯ ಭಾಗ. ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಯಶಸ್ಸಿನ ನಡುವೆ, ಚಿತ್ರ ತಂಡ ಭರ್ಜರಿ ಸ್ಟೆಪ್ ಹಾಕ್ತು. ಉಡುಪಿಯ ಕಡಿಯಾಳಿಯಲ್ಲಿ ನಡೆದ ಹುಲಿಕುಣಿತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರೇಕ್ಷಕರನ್ನ ರಂಜಿಸಿದ್ರು.

ಹುಲಿ ಕುಣಿತದ ವೇಳೆ ಆವೇಶಕ್ಕೊಳಗಾದ ವೇಷಧಾರಿ

ಇತ್ತೀಚೆಗೆ ಹುಲಿ ವೇಷ ಕಮರ್ಷಿಯಲ್‌ ಟಚ್‌ ಪಡೆದ್ರೂ, ಇಂದಿಗೂ ಹರಕೆ ರೂಪದಲ್ಲಿ ಭಕ್ತಿಯಿಂದ ವೇಷ ಹಾಕುವವರೂ ಇದ್ದಾರೆ. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಉಡುಪಿ ನಗರದ ನಿಟ್ಟೂರಿನಲ್ಲಿ ಹುಲಿವೇಷ ಕುಣಿತ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆ ಹಿನ್ನೆಲೆ ಹತ್ತಾರು ತಂಡಗಳು ಭಾಗವಹಿಸಿದ್ದವು. ಈ ವೇಳೆ, ಹುಲಿ ವೇಷಧಾರಿಯೊಬ್ಬನ ಮೇಲೆ ಆವೇಶ ಬಂದ ವಿಸ್ಮಯಕಾರಿ ಘಟನೆ ನಡೀತು. ಎರಡು ದಿನಗಳ ಕಾಲ ಕೃಷ್ಣನೂರಿನ‌ ಉತ್ಸವಕ್ಕೆ ಅದ್ದೂರಿ ತೆರೆ ಬಿದ್ದಿದೆ. ಮುಂದೆ ಒಂದು ವಾರಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮಠದ ಅಂಗಳದಲ್ಲಿ ನಡೆಯಲಿವೆ.

You cannot copy content from Baravanige News

Scroll to Top