ಮೃತಪಟ್ಟಿದ್ದಾಳೆ ಎಂದುಕೊಂಡು 3 ದಿನದಿಂದ ಶವಕ್ಕಾಗಿ ಹುಡುಕಾಟ : ನನ್ನನ್ನು ಹುಡುಕ್ಬೇಡಿ ಅಂತ ಬೆಂಗ್ಳೂರಿಂದ ಬಂತು ಕರೆ

ಮಡಿಕೇರಿ : ಕಳೆದ 3 ದಿನಗಳಿಂದ ಮಹಿಳೆ ಮೃತಪಟ್ಟಿದ್ದಾಳೆ ಎಂದುಕೊಂಡು ಜಲಪಾತವೊಂದರಲ್ಲಿ ಶವಕ್ಕಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಕೊನೆಗೂ ಮಹಿಳೆ ಸಂಬಂಧಿಕರಿಗೆ ಕರೆ ಮಾಡಿ ನನ್ನನ್ನು ಹುಡುಕಬೇಡಿ ಎಂದು ಹೇಳಿದ್ದಾಳೆ.

ನನ್ನನ್ನು ಹುಡುಕಬೇಡಿ, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆಯಲಾಗಿದ್ದ ಡೆತ್ ನೋಟ್, ಜೊತೆಗೊಂದಿಷ್ಟು ದಾಖಲೆಗಳಿದ್ದ ಬ್ಯಾಗ್, ಪಕ್ಕದಲ್ಲಿಯೇ ಚಪ್ಪಲಿ, ಇವೆಲ್ಲಾ ದೊರೆತ್ತಿದ್ದು ಮಡಿಕೇರಿ ಸಮೀಪದ ಅಬ್ಬಿ ಜಲಪಾತದ ಬಳಿ. ಈ ರೀತಿ ಪ್ರಕರಣಗಳು ಕಂಡು ಬಂದರೆ, ಸಾವು ಸಂಭವಿಸಿರಬಹುದು ಎಂದು ಶಂಕಿಸುವುದು ಸಹಜ. ಈ ನಿಟ್ಟಿನಲ್ಲಿ ಕಳೆದ 3 ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಗಾಗಿ ಪೊಲೀಸರು, ಅಗ್ನಿಶಾಮಕದಳ, ಎನ್‌ಡಿಆರ್‌ಎಫ್ ತಂಡ ಜಲಪಾತದಲ್ಲಿ ತೀವ್ರ ಹುಡುಕಾಟ ನಡೆಸಿತ್ತು.


ಮುಳುಗು ತಜ್ಞರು ನೀರಿಗಿಳಿದು ಶೋಧ ನಡೆಸುತ್ತಿದ್ದರು. ಆದರೆ ಆಕೆ ಇದೀಗ ಬೆಂಗಳೂರಿನಲ್ಲಿದ್ದಾಳೆ ಎಂಬುದು ಖಾತರಿಯಾಗಿದೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದಿಂದ ಸೆಪ್ಟೆಂಬರ್ 5 ರಂದು ನಾಪತ್ತೆಯಾಗಿದ್ದ ಸರಸ್ವತಿಯ (33) ದಾಖಲೆಗಳು ಹಾಗೂ ಆಕೆ ಬರೆದಿಟ್ಟಿದ್ದಾಳೆ ಎನ್ನಲಾದ ಡೆತ್‌ನೋಟ್ ನಗರದ ಹೊರವಲಯದ ಅಬ್ಬಿ ಜಲಪಾತದ ಬಳಿ ಸೆಪ್ಟೆಂಬರ್ 8 ರಂದು ಪತ್ತೆಯಾಗಿತ್ತು. ಮಹಿಳೆ ನಾಪತ್ತೆಯಾದ ಕುರಿತು ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಅಬ್ಬಿ ಜಲಪಾತದ ಬಳಿ ಸರಸ್ವತಿಗೆ ಸೇರಿದ ವಸ್ತುಗಳು ದೊರೆತ ಹಿನ್ನೆಲೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪಿರಿಯಾಪಟ್ಟಣ ಪೊಲೀಸರನ್ನು ಸಂಪರ್ಕಿಸಿ ಈಕೆಯ ಕುರಿತು ಮಾಹಿತಿ ಪಡೆಯುವ ಸಂದರ್ಭ ಕೆಲವು ದಿನಗಳಿಂದ ನಾಪತ್ತೆಯಾಗಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಸಹಾಯದಿಂದ ಕಳೆದ 3 ದಿನಗಳಿಂದ ಕಾರ್ಯಾಚರಣೆಗಿಳಿದಿತ್ತು. ಎಷ್ಟೇ ಹುಡುಕಾಟ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ.

ಮೃತಪಟ್ಟಿದ್ದಾಳೆ ಎಂದುಕೊಂಡು ಜಲಪಾತದಲ್ಲಿ ಶೋಧ ಕಾರ್ಯ ನಡೆಸುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಸರಸ್ವತಿ ತನ್ನ ಸಹೋದರನಿಗೆ ಕರೆ ಮಾಡಿ ನಾನು ಬೆಂಗಳೂರಿನಲ್ಲಿ ಇದ್ದೇನೆ, ನನ್ನನ್ನು ಯಾರು ಕೂಡಾ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಹೇಳಿ ಪೋನ್ ಕಟ್ ಮಾಡಿದ್ದಾಳೆ. ಇದೀಗ ಕುಟುಂಬಸ್ಥರು ಸರಸ್ವತಿಯನ್ನು ಹುಡುಕಿಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

Scroll to Top