ಉಡುಪಿ : ಚೈತ್ರಾ ಕುಂದಾಪುರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿಜೆಪಿಗೆ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪದಡಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ.
ಗೋವಿಂದ ಬಾಬು ಪೂಜಾರಿ ಎಂಬವರಿಗೆ ಸುಮಾರು 5 ಕೋಟಿ ರೂಪಾಯಿ ವಂಚನೆ ಮಾಡಿದ್ದು, ಇವರು ನೀಡಿದ ದೂರಿನ ಅನ್ವಯ ಉಡುಪಿಯಲ್ಲಿ ಚೈತ್ರಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿನಿಮಾ ಸ್ಟೈಲ್ನಲ್ಲಿ ವಂಚನೆ
ಗೋವಿಂದ ಬಾಬು ಪೂಜಾರಿಗೆ ಚೈತ್ರಾ ಕುಂದಾಪುರ ಸಿನಿಮಾ ಸ್ಟೈಲ್ ನಲ್ಲಿ ವಂಚಿಸಿದ ಆರೋಪ ಕೇಳಿಬಂದಿದೆ. ಸಾಮಾನ್ಯರನ್ನು ಕರೆದುಕೊಂಡು ಬಂದು ಆರ್.ಎಸ್.ಎಸ್ ಪ್ರಚಾರಕರ ರೀತಿ ಡ್ರಾಮಾ ಮಾಡಿಸಿದ್ದಾಳೆ. ಸಲೂನ್ನಲ್ಲಿ ಮೇಕಪ್ ಮಾಡಿಸಿ ಆರ್ಎಸ್ಎಸ್ ಪ್ರಚಾರಕರನೆಂದು ಹೇಳಿದ್ದಾಳೆ. ಇದಕ್ಕಾಗಿ ಆರ್.ಎಸ್.ಎಸ್ ಪ್ರಚಾರಕರ ರೀತಿ ನಟಿಸಲು ತರಬೇತಿ ನೀಡಿದ್ದು, ನಟನೆ ಮಾಡಿದ ಆಸಾಮಿಗೆ ಲಕ್ಷ ಲಕ್ಷ ಸಂಭಾವನೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿಜೆಪಿ ಪ್ರಧಾನ ಕಚೇರಿಯಲ್ಲೂ ನನ್ನ ಪ್ರಭಾವ ಇದೆ
ಇದಲ್ಲದೆ, ಗೋವಿಂದ ಬಾಬು ಪೂಜಾರಿಗೆ ನಾನು ಹಿಂದು ಸಂಘಟನೆಯಲ್ಲಿ ಇದ್ದೇನೆ ಎಂದು ಪರಿಚಯಿಸಿಕೊಂಡಿದ್ದ ಚೈತ್ರಾ ಕುಂದಾಪುರ, ನನಗೆ ಬಿಜೆಪಿ ಆರ್ ಎಸ್ ಎಸ್ ವರಿಷ್ಠರು ಹತ್ತಿರ ಇದ್ದಾರೆ. ಬಿಜೆಪಿ ಪ್ರಧಾನ ಕಚೇರಿಯಲ್ಲೂ ನನ್ನ ಪ್ರಭಾವ ಇದೆ. ಸುಪ್ರೀಂ ಕೋರ್ಟ್ ಜಡ್ಜ್ ಗಳು ನನಗೆ ಪರಿಚಯ ಇದ್ದಾರೆ. ಅವರೆಲ್ಲರ ಪ್ರಭಾವ ಬಳಸಿ ಟಿಕೆಟ್ ಕೊಡಿಸ್ತೇನೆ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ ಎಂದು ವಂಚನೆಗೊಳಗಾದ ವ್ಯಕ್ತಿ ದೂರಿದ್ದಾರೆ.
ಮೊದಲಿಗೆ ಟಿಕೆಟ್ ಕೊಡಿಸುವ ಭರವಸೆ
ಚಿಕ್ಕಮಗಳೂರು ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು ಮೂಲಕ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದ ಚೈತ್ರಾ ಕುಂದಾಪುರ, ಟಿಕೆಟ್ ಕೊಡಿಸೋದಾಗಿ ನಂಬಿಸಿದ್ದಾಳೆ. ಉಡುಪಿ ಸರ್ಕಾರಿ ಅತಿಥಿ ಗೃಹದಲ್ಲಿ ಮೀಟಿಂಗ್ ಮಾಡಿ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದಾಳೆ. ಟಿಕೆಟ್ ಗಿಟ್ಟಿಸಲು ಆರ್.ಎಸ್.ಎಸ್ ರಾಷ್ಟ್ರೀಯ ಪ್ರಮುಖರ ಶಿಫಾರಸ್ಸು ಇರಬೇಕು. ಆರ್.ಎಸ್.ಎಸ್ ಹಿರಿಯ ಪ್ರಚಾರಕ ವಿಶ್ವನಾಥ್ ಜಿ ಮೂಲಕ ಶಿಫಾರಸ್ಸು ಮಾಡೋದಾಗಿ ಭರವಸೆ ನೀಡಿದ್ದು, ಚಿಕ್ಕಮಗಳೂರಲ್ಲಿ ವಿಶ್ವನಾಥ್ ಜೀ ಅಂತಾ ಬೇರೊಬ್ಬನನ್ನ ಭೇಟಿ ಮಾಡಿಸಿ ವಂಚಿಸಿದ್ದಾಳೆ ಎಂದು ಗೋವಿಂದ ಬಾಬು ಪೂಜಾರಿ ದೂರಿದ್ದಾರೆ.
ಆರ್.ಎಸ್.ಎಸ್ ಪ್ರಚಾರಕರ ರೀತಿ ಮೇಕಪ್
ರಮೇಶ್ ಎಂಬಾತನನ್ನ ಇವರೆ ವಿಶ್ವನಾಥ್ ಎಂದು ಪರಿಚಯ ಮಾಡಿಸಿದ್ದಾಳೆ. ಸಲೂನ್ ಶಾಪ್ ನಲ್ಲಿ ಆರ್.ಎಸ್.ಎಸ್ ಪ್ರಚಾರಕರ ರೀತಿ ಮೇಕಪ್ ಮಾಡಿಸಿ. ನಾನು ಕೇಂದ್ರ ಬಿಜೆಪಿ ಆಯ್ಕೆ ಸಮಿತಿ ಸದಸ್ಯನಾಗಿದ್ದೇನೆ. ಆರ್.ಎಸ್.ಎಸ್ ಮತ್ತು ಬಿಜೆಪಿ ಸಮನ್ವಯಕಾರನಾಗಿದ್ದೇನೆ. ಟಿಕೆಟ್ ವಿಚಾರದಲ್ಲಿ ನನ್ನ ನಿರ್ಧಾರವೇ ಅಂತಿಮವಾಗಿರುತ್ತೆ. ಆದರೆ ಸಾಕಷ್ಟು ಹಣ ನೀಡಿದರೆ ಮಾತ್ರ ಟಿಕೆಟ್ ಸಿಗುತ್ತದೆ. ಟಿಕೆಟ್ ಪ್ರಕ್ರಿಯೆ ಆರಂಭಿಸಲು ಮೂರು ದಿನದಲ್ಲಿ 50 ಲಕ್ಷ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾಳೆ. ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ 3 ಕೋಟಿ ನೀಡುವಂತೆ ಹೇಳಿದ್ದು, ಟಿಕೆಟ್ ಸಿಗದಿದ್ರೆ ಎಲ್ಲಾ ಹಣ ವಾಪಸ್ಸು ಕೊಡೋದಾಗಿ ಭರವಸೆ ನೀಡಿದ್ದಾಳೆ. ಈ ಮಾತನ್ನ ನಂಬಿ 7-7-2022 ರಂದು 50 ಲಕ್ಷ ರೂಪಾಯಿಯನ್ನ ಗೋವಿಂದ ಬಾಬು ಪೂಜಾರಿ ನೀಡಿದ್ದಾರೆ.
ಬೈಂದೂರಿನಿಂದ ಸ್ಪರ್ಧಿಸಲು ಟಿಕೆಟ್
ವಿಶ್ವನಾಥ್, ಗಗನ್,ಚೈತ್ರಾ ಸೇರಿ ಗೋವಿಂದ ಬಾಬು ಪೂಜಾರಿಗೆ ಕಾನ್ಫರೆನ್ಸ್ ಕರೆ ಮಾಡಿದ್ದಾರೆ ವಂಚಿಸಿದ್ದಾರೆ. ಬೈಂದೂರಿನಿಂದ ಸ್ಪರ್ಧಿಸಲು ಟಿಕೆಟ್ ನೀಡಲು ಕೇಂದ್ರ ಬಿಜೆಪಿ ನಾಯಕರು ಒಪ್ಪಿರೋದಾಗಿ ಹೇಳಿದ್ದು, ಪ್ರಸಾದ್ ಬೈಂದೂರು ಮೂಲಕ ಗಗನ್ ಗೆ ಗೋವಿಂದ ಪೂಜಾರಿ ಹಣ ನೀಡಿದ್ದಾರೆ.
ಹಡಗಲಿ ಅಭಿನವ ಹಾಲಶ್ರೀ ಸ್ವಾಮೀಜಿ ಶಿಫಾರಸ್ಸು
ಈ ವೇಳೆ ಹಿರಿಯ ಹಡಗಲಿ ಅಭಿನವ ಹಾಲಶ್ರೀ ಸ್ವಾಮೀಜಿ ಶಿಫಾರಸ್ಸು ಕೂಡ ಮುಖ್ಯ ಎಂದು ಅವರನ್ನು ಭೇಟಿ ಆಗಲು ಗೋವಿಂದ ಪೂಜಾರಿ ತೆರಳಿದ್ದಾರೆ. ಬಳಿಕ ಮುಂದಿನ ಪ್ರಕ್ರಿಯೆಗೆ 1.5 ಕೋಟಿ ನೀಡುವಂತೆ ಸ್ವಾಮೀಜಿ ಸೂಚಿಸಿದ್ದು, ಈ ಹಣವನ್ನು ಗೋವಿಂದ ಬಾಬು ಪೂಜಾರಿ ನೀಡಿದ್ದರು.
ಕಬಾಬ್ ವ್ಯಾಪಾರಿ ಚುನಾವಣಾ ಸಮಿತಿ ಸದಸ್ಯ!
ಇದರ ಜೊತೆಗೆ ಕಬಾಬ್ ವ್ಯಾಪಾರಿ ನಾಯ್ಕ್ ಎಂಬಾತನನ್ನು ಚೈತ್ರಾ ಆ್ಯಂಡ್ ಟೀಂ ಚುನಾವಣಾ ಸಮಿತಿ ಸದಸ್ಯ ಎಂದು ಪರಿಚಯ ಮಾಡಿಕೊಂಡಿದ್ದರು. 23 ಅಕ್ಟೋಬರ್ 2022 ರಂದು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಪ್ರಮುಖರು ಬೆಂಗಳೂರಿಗೆ ಬರ್ತಿದ್ದಾರೆ. ಈ ವೇಳೆ ಕೆ.ಕೆ.ಗೆಸ್ಟ್ ಹೌಸ್ನಲ್ಲಿ ಆತ ತಂಗಿದ್ದು, ಹಂತ ಹಂತವಾಗಿ ಒಟ್ಟು ಐದು ಕೋಟಿ ವಂಚನೆ ಮಾಡಿದ್ದಾಳೆ ಎಂದು ಗೋವಿಂದ ಬಾಬು ಪೂಜಾರಿ ಆರೋಪಿಸಿದ್ದಾರೆ.
ಇನ್ನು ಟಿಕೆಟ್ ಕೈ ತಪ್ಪಿದಕ್ಕೆ ಪ್ರಶ್ನೆ ಮಾಡಿದ್ದ ಗೋವಿಂದ ಬಾಬುಗೆ ವಿಶ್ವನಾಥ್ ಜೀ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾಳೆ. ಅಂತ್ಯಸಂಸ್ಕಾರಕ್ಕೆ ಹೋಗೋಣ ಎಂದಿದ್ದಕ್ಕೆ. ಆರ್.ಎಸ್.ಎಸ್ ನಲ್ಲಿ ಈ ರೀತಿ ಸಾವಿಗೆ ಹೋಗೋ ಹಾಗಿಲ್ಲ. ಕುಟುಂಬದವ್ರೇ ಸೇರಿ ಕಾಶ್ಮೀರದಲ್ಲೇ ಅಂತ್ಯ ಸಂಸ್ಕಾರ ಮಾಡಿದ್ದಾಗಿ ಹೇಳಿ ಪಂಗನಾಮ ಹಾಕಿದ್ದಾಳೆ ಎಂದು ವಂಚನೆಗೊಳಗಾದ ವ್ಯಕ್ತಿ ಹೇಳಿದ್ದಾರೆ.