ಮತ್ತೆ ಹುಟ್ಟಿ ಬನ್ನಿ ಅಪ್ಪ.. ಕರ್ನಲ್ ಮನ್‌ಪ್ರೀತ್ ಸಿಂಗ್ ಮಕ್ಕಳ ಸೆಲ್ಯೂಟ್‌..

ಶ್ರೀನಗರ : ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿರುವ ಭಾರತೀಯ ಯೋಧರ ಮೃತದೇಹಗಳನ್ನು ಅವರ ಹುಟ್ಟೂರಿಗೆ ತಲುಪಿಸಲಾಗಿದ್ದು ಕುಟುಂಬಸ್ಥರು, ಬಂಧು-ಬಳಗಗಳ ಆಕ್ರಂದನ ಮುಗಿಲು ಮುಟ್ಟಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು ಭಾರತ್ ಮಾತ ಕೀ ಎನ್ನುತ್ತ ತ್ರಿವರ್ಣ ಧ್ವಜವನ್ನಿಡಿದು ನೆಚ್ಚಿನ ತಮ್ಮೂರಿನ ಯೋಧನಿಗೆ ಗೌರವ ನಮನ ಸಮರ್ಪಣೆ ಮಾಡುತ್ತಿದ್ದಾರೆ. ತಂದೆಯ ಮೃತದೇಹಕ್ಕೆ 6 ವರ್ಷದ ಮಗ, 2 ವರ್ಷದ ಮಗಳು ಸೆಲ್ಯೂಟ್ ಮಾಡುತ್ತಿರೋ ದೃಶ್ಯ ನೋಡುವವರಿಗೆ ಕಣ್ಣೀರು ತರಿಸುವಂತಿದೆ.

ಕರ್ನಲ್ ಮನ್‌ಪ್ರೀತ್ ಸಿಂಗ್ ಅವರು ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯ ಇವರ ಮೃತದೇಹವನ್ನು ಮೊಹಾಲಿ ಜಿಲ್ಲೆಯ ಮುಲ್ಲನ್‌ಪುರ ಗರೀಬ್ದಾಸ್ ಟೌನ್‌ಶಿಪ್‌ನಲ್ಲಿರುವ ಭರೌಂಜಿಯಾನ್ ಗ್ರಾಮಕ್ಕೆ ತರಲಾಗಿದೆ. ಅವರ ಮನೆಯಲ್ಲಿ ಸಂಪೂರ್ಣ ಮೌನ ಆವರಿಸಿದ್ದು ಮೃತ ಯೋಧನ ಪತ್ನಿ ಹಾಗೂ ಕುಟುಂಬಸ್ಥರಿಗೆ ದಿಕ್ಕು ದೋಚದಂತಾಗಿದೆ.

ತಂದೆಯ ಮೃತ ದೇಹಕ್ಕೆ 6 ವರ್ಷದ ಮಗ ಕಬೀರ್ ಸಿಂಗ್, 2 ವರ್ಷದ ಮಗಳು ಬಾನಿ ಕೌರ್ ಸೆಲ್ಯೂಟ್ ಮಾಡುತ್ತಿರೋ ದೃಶ್ಯ ಎಂತಹವರ ಕರುಳು ಹಿಂಡುವಂತಿದೆ. ಇವರ ಸಲ್ಯೂಟ್ ನೋಡುವವರಿಗೆ ಕಣ್ಣೀರು ಬರದೇ ಇರದು. ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯವು ಮಕ್ಕಳ ಮುಗ್ಧತೆಯ ಸೆಲ್ಯೂಟ್ ದುಖವನ್ನುಂಟು ಮಾಡುವಂತಿದೆ. ಇನ್ನು ಪತ್ನಿ ಜಗ್ಮೀತ್ ಗ್ರೆವಾಲ್ ಅಂತೂ ಅಕ್ಷರಶ ಕುಸಿದು ಹೋಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಜನರು ವೀರ ಯೋಧನಿಗೆ ಜೈಕಾರ ಕೂಗುತ್ತ ತ್ರಿವರ್ಣ ಧ್ವಜವನ್ನಿಡಿದು ಗೌರವ ಸಮರ್ಪಣೆ ಮಾಡುತ್ತಿದ್ದಾರೆ.


ತಂದೆ ನಿರ್ವಹಿಸಿದ್ದ ಟೀಮ್ಗೆ ಮಗ ನೇಮಕ

ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ತಂದೆ ಲಖ್ಮೀರ್ ಸಿಂಗ್ ಕೂಡ ಯೋಧರಾಗಿದ್ದರು. ಇವರು 2014ರಲ್ಲಿ ಮೃತಪಟ್ಟಿದ್ದಾರೆ. ತಂದೆ ನಿರ್ವಹಿಸಿದ್ದ ತಂಡಕ್ಕೆ ಮಗ ಮನ್‌ಪ್ರೀತ್ ಕರ್ನಲ್ ಆಗಿ ನೇಮಕವಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.

ಜಮ್ಮುಕಾಶ್ಮೀರದ ಅನಂತನಾಗ್ ಮತ್ತು ರಾಜೌರಿ ವ್ಯಾಪ್ತಿಯಲ್ಲಿ ಬರುವ ಕೋಕರ್ನಾಗ್ ಎನ್ನುವ ದಟ್ಟ ಅರಣ್ಯ ಪ್ರದೇಶದಲ್ಲಿ ಸೆ.12 ರಿಂದ ಭಾರತೀಯ ಸೈನಿಕರು ಮತ್ತು ಕಾಶ್ಮೀರದ ಪೊಲೀಸರು ಜಂಟಿಯಾಗಿ ಉಗ್ರರನ್ನು ಬೇಟೆಯಾಡುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಂಜಾಬ್ನ ಮೊಹಾಲಿಯ ಕರ್ನಲ್ ಮನ್‌ಪ್ರೀತ್ ಸಿಂಗ್, ಹರಿಯಾಣದ ಮೇಜರ್ ಆಶಿಶ್ ಧೋಂಚಕ್ ಮತ್ತು ಕಾಶ್ಮೀರದ ಡಿಎಸ್ಪಿ ಹಿಮನ್ಯುನ್ ಮುಜಾಮಿಲ್ ಭಟ್ ಅವರು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಣೆ ಮಾಡಿದ್ದಾರೆ.

Scroll to Top