ಮಲ್ಪೆ : ಸೌಜನ್ಯಾ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಹೋರಾಟಗಾರರ ಬೇಡಿಕೆ ಮರು ತನಿಖೆ. ಮೇಲ್ಮನವಿಯಿಂದ ಹೋರಾಟ ನಿಂತು ಹೋಗುತ್ತದೆ. ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣನವರ್ ಹೇಳಿದರು.
ಶುಕ್ರವಾರ ಸಂಜೆ ಮಲ್ಪೆ ಸೀವಾಕ್ ಪ್ರದೇಶದಲ್ಲಿ ಯುವ ಭಾರತ್ ಕರ್ನಾಟಕ ಸಂಘಟನೆ ಮತ್ತು ಕರಾವಳಿಯ ವಿವಿಧ ಭಜನಾ ಮಂದಿರಗಳು, ಸಂಘಸಂಸ್ಥೆಗಳ ವತಿಯಿಂದ ನಡೆದ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಕರಣದ ಕುರಿತಾಗಿ ಮತ್ತೆ ಮೇಲ್ಮನವಿ ಹಾಕಿದರೆ ಮರು ತನಿಖೆಗೆ ಸರಕಾರವೂ ನಿರಾಕರಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ, ತನಿಖೆಯಲ್ಲಿ ನಿಜವಾದ ಅಪರಾಧಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತಂದು ಶಿಕ್ಷೆ ನೀಡಲು ಆಡಳಿತ ವ್ಯವಸ್ಥೆ ವಿಫಲವಾಗಿದೆ. ಸರಕಾರವು ಸೌಜನ್ಯಾ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸಭೆ ಆರಂಭದ ಮೊದಲು ಹನುಮಾನ್ ವಿಠೊಭ ಭಜನಾ ಮಂದಿರಕ್ಕೆ ತೆರಳಿ ಹನುಮಾನ್ ಮತ್ತು ವಿಠೊಭುರುಖುಮಾಯಿ ದೇವರಿಗೆ ಪೂಜೆ ಸಲ್ಲಿಸಲಾಯಿತು.
ಹೋರಾಟಗಾರ ತಮ್ಮಣ್ಣ ಶೆಟ್ಟಿ, ಸೌಜನ್ಯಾ ತಾಯಿ ಕುಸುಮಾವತಿ ಮಾತನಾಡಿದರು.