ಉಡುಪಿ ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಉಡುಪಿಯ ಕಡಿಯಾಳಿ, ಅಲೆವೂರು, ಅಂಬಲಪಾಡಿ, ಮಣಿಪಾಲ, ಮಲ್ಪೆ, ಹಿರಿಯಡ್ಕ, ಕಾಪು, ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಕುಂದಾಪುರ, ಬೈಂದೂರು ಸೇರಿದಂತೆ ಜಿಲ್ಲೆಯ 470 ಕಡೆಗಳಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸಲಾಯಿತು.
ಕುಂದಾಪುರದ ಕೆಲವು ಕಡೆಗಳಲ್ಲಿ ಸೋಮವಾರವೇ ಗಣೇಶ ಹಬ್ಬವನ್ನು ಆಚರಿಸಿ ಸಾರ್ವಜನಿಕ ಗಣೇಶೋತ್ಸವದಲ್ಲಿನ ಗಣೇಶನ ಮೂರ್ತಿಯನ್ನು ಸಂಜೆಯೇ ವಿಸರ್ಜನೆ ಮಾಡಲಾಯಿತು.
ಉಡುಪಿಯಲ್ಲಿ ಕೆಲವು ಕಡೆ ನಿನ್ನೆ ಸಂಜೆ ಗಣೇಶನ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ವಿಸರ್ಜಿಸಲಾಯಿತು. ಚೌತಿ ಪ್ರಯುಕ್ತ ಭಕ್ತರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಉಡುಪಿ ಶ್ರೀಕೃಷ್ಣಮಠದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಮಂಟಪದಲ್ಲಿ ಗಣೇಶ ಮೂರ್ತಿಯನ್ನಿರಿಸಿ, ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾ ಸಾಗರತೀರ್ಥ ಸ್ವಾಮೀಜಿ ಹಾಗೂ ಶೀರೂರು ಮಠಾಧೀಶ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಪರ್ಯಾಯ ಮಠದ ಪುರೋಹಿತ ಶ್ರೀನಿವಾಸ ಉಪಾಧ್ಯಾಯರು ಗಣಹೋಮ ಮಾಡಿ ವಿಶೇಷ ಪೂಜೆಯನ್ನು ನೆರವೇರಿಸಿದರು.
ಬಿಗಿ ಪೊಲೀಸ್ ಭದ್ರತೆ
ಗಣೇಶ ಚತುರ್ಥಿ ಪ್ರಯುಕ್ತ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಮಾರ್ಗ ದರ್ಶನದಲ್ಲಿ ಉಡುಪಿ ನಗರ ಹಾಗೂ ಗಂಗೊಳ್ಳಿ ಪ್ರದೇಶಗಳಲ್ಲಿ ನೂರಾರು ಪೊಲೀಸರಿಂದ ಪಥ ಸಂಚಲನವನ್ನು ನಡೆಸಲಾಗಿತ್ತು.