ಚೈತ್ರಾ ಹೇಳಿದಂತೆ ಕೇಳಿದ್ದೀನಿ; ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡ ಹಾಲಶ್ರೀ

ಬೆಂಗಳೂರು: ಚೈತ್ರಾ ಅಂಡ್‌ ಗ್ಯಾಂಗ್‌ನ ವಂಚನೆ ಪ್ರಕರಣ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಸ್ವಾಮೀಜಿ ಬಂಧನದ ಬಳಿಕ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದಿದ್ದು, ಅಭಿನವ ಹಾಲಶ್ರೀ ಸಿಸಿಬಿ ತನಿಖಾಧಿಕಾರಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ ಹಣ ಪಡೆದಿದ್ದು ನಿಜ. ಎಂಎಎಲ್‌ಎ ಟಿಕೆಟ್ ವಿಚಾರವಾಗಿ ಹಣ ಪಡೆದಿದ್ದೆ, ಆದರೆ ಟಿಕೆಟ್ ಸಿಗಲಿಲ್ಲವಾದ್ದರಿಂದ ಹಣ ವಾಪಸ್ ಕೊಡೋದಾಗಿ ಹೇಳಿದ್ದೆ. ಈಗಾಗಲೆ 50 ಲಕ್ಷ ಹಣ ವಾಪಸ್‌ ಕೊಟ್ಟಿದ್ದೇನೆ. ಉಳಿದ ಹಣ ಮಠದಲ್ಲಿದೆ ಅಂತ ಸ್ವಾಮೀಜಿ ಅಧಿಕಾರಿಗಳ ಮುಂದೆ ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೇ ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ, ಚೈತ್ರಾ ಹೇಳಿದಂತೆ ಕೇಳಿದ್ದೀನಿ. ತಪ್ಪಿಗೆ ನಾನೇ ಹೊಣೆಯಾಗಿದ್ದು, ಬೇರೆ ಯಾರೂ ಈ ಕೇಸ್ ನಲ್ಲಿ ಇಲ್ಲ ಅಂತಾ ಅಭಿನವ ಹಾಲಶ್ರೀ ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಈ ನಡುವೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆಯಲು ಹೋಗಿ 5 ಕೋಟಿ ರೂ. ಕಳೆದುಕೊಂಡಿರುವುದಾಗಿ ದೂರು ನೀಡಿರುವ ಗೋವಿಂದ ಬಾಬು ಪೂಜಾರಿ ವಿರುದ್ಧವೇ ಈಗ ಜಾರಿ ನಿರ್ದೇಶನಾಲಯದಲ್ಲಿ (ಇಡಿ) ದೂರು ದಾಖಲಾಗಿದೆ. 5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಟಿಕೆಟ್‌ಗೆ ನೀಡಿದ್ದು ಹವಾಲಾ ಹಣ. ಅವರು ನಗದು ರೂಪದಲ್ಲಿ ನೀಡಿರುವುದು ಅಪರಾಧವಾಗಿದ್ದು ಅವರ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ವಕೀಲ ನಟರಾಜ ಶರ್ಮಾ ದೂರು ನೀಡಿದ್ದಾರೆ.

You cannot copy content from Baravanige News

Scroll to Top