ಆಗುಂಬೆ ಘಟನೆಯ ವೀಡಿಯೋ ವೈರಲ್‌ : 10 ಮಂದಿಯ ವಿರುದ್ಧ ಪ್ರಕರಣ ದಾಖಲು..!!!

ಕಾಪು: ಒಂದು ತಿಂಗಳ ಹಿಂದೆ ಆಗುಂಬೆ ಬಳಿ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರದೇಶಕ್ಕೆ ಸೇರಿದ್ದ ಅನ್ಯಕೋಮಿಗೆ ಸೇರಿದ ಯುವಕ – ಯುವತಿಯನ್ನು ರಸ್ತೆ ಮಧ್ಯೆ ತಡೆದು ನಿಲ್ಲಿಸಿ ವಿಚಾರಣೆ ನಡೆಸಿ ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ ಆರೋಪದ ಮೇಲೆ ಆಗುಂಬೆ ಪರಿಸರದ 10 ಮಂದಿಯ ವಿರುದ್ಧ ಗುರುವಾರ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆ. 22ರಂದು ಬೈಕ್‌ನಲ್ಲಿ ಆಗುಂಬೆ ಸಮೀಪದ ಸಿರಿಮನೆ ಫಾಲ್ಸ್‌ಗೆ ತೆರಳಿದ್ದ ಅನ್ಯಕೋಮಿನ ಯುವಕ ಮತ್ತು ಯುವತಿ ಅಲ್ಲಿಂದ ವಾಪಸ್‌ ಬರುವಾಗ ಯುವಕರ ಗುಂಪು ತಡೆದು ವಿಚಾರಣೆ ನಡೆಸಿತ್ತು. ಈ ಸಂದರ್ಭ ವೀಡಿಯೋ ಚಿತ್ರೀಕರಣ ಮಾಡಿದ್ದ ತಂಡ ಬಳಿಕ ಅವರನ್ನು ಆಗುಂಬೆ ಪೊಲೀಸ್‌ ಠಾಣೆಗೆ ಕರೆದೊಯ್ದಿತ್ತು. ಪೊಲೀಸರು ಅವರಿಬ್ಬರ ಮನೆಯವರನ್ನು ಠಾಣೆಗೆ ಕರೆಯಿಸಿದ್ದು, ಅವರು ಪರಿಚಯಸ್ಥರಾಗಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಮಾತುಕತೆ ನಡೆಸಿ ಕಳುಹಿಸಿದ್ದರು.

ಆದರೆ ಘಟನೆ ವೇಳೆ ಮಾಡಿದ್ದ ವೀಡಿಯೋವನ್ನು ತಿಂಗಳ ಬಳಿಕ ಸಾಮಾಜಿಕ ಜಾಲತಾಣಗಳ‌ಲ್ಲಿ ಹರಿಯ ಬಿಡಲಾಗಿದ್ದು, ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ ಯುವತಿಯ ಸಹೋದರ ಘಟನೆ ಮತ್ತು ವೀಡಿಯೋ ವೈರಲ್‌ ಮಾಡಿರುವ ಬಗ್ಗೆ ಕಾಪು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಕಾಪು ಪೊಲೀಸರು ಅದನ್ನು ಆಗುಂಬೆ ಠಾಣೆಗೆ ಹಸ್ತಾಂತರಿಸಿದ್ದಾರೆ.

ಪ್ರಕರಣ ಅಲ್ಲಿಯೇ ನಡೆದಿರುವುದರಿಂದ ಅಲ್ಲಿನ ಪೊಲೀಸರು ತನಿಖೆ ಮುಂದುವರೆಸಲಿದ್ದಾರೆ ಎಂದು ಕಾಪು ಠಾಣಾಧಿಕಾರಿ ಅಬ್ದುಲ್‌ ಖಾದರ್‌ ಅವರು ತಿಳಿಸಿದ್ದಾರೆ.

Scroll to Top