ಇನ್ಸ್ಟಾದಲ್ಲಿ ಲೈವ್ ಬಂದು ಆತ್ಮಹತ್ಯೆಗೆ ಯತ್ನ : ಲೋಕೇಷನ್ ಟ್ರ್ಯಾಕ್ ಮಾಡಿ ಯುವಕನ ಜೀವ ಉಳಿಸಿದ ಪೊಲೀಸರು

ನವದೆಹಲಿ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಟ್ರ್ಯಾಕ್ ಮಾಡಿ ಜೀವ ಉಳಿಸಿರುವ ಘಟನೆ ನಗರದ ಶಾಹದಾರ ಛೋಟಾ ಠಾಕೂರ್ ದ್ವಾರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ವ್ಯಕ್ತಿ ಇನ್ಸ್ಟಾದಲ್ಲಿ ಲೈವ್ ಕೊಡುತ್ತ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ. ಇದನ್ನು ಆ ವ್ಯಕ್ತಿಯ ಸಹೋದರ ಇನ್ಸ್ಟಾದಲ್ಲೇ ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ತುರ್ತಾಗಿ ಎಚ್ಚೆತ್ತುಕೊಂಡ ಪೊಲೀಸರು ಇಲಾಖೆಯ ಟೆಕ್ನಿಕಲ್ ತಜ್ಞರ ಸಹಾಯ ಪಡೆದು ನಿರ್ಧಿಷ್ಟ ಸ್ಥಳ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಅಲ್ಲಿ 28 ವರ್ಷದ ವ್ಯಕ್ತಿಯನ್ನು ಕಾಪಾಡಿ ಆಸ್ಪತ್ರೆಗೆ ದಾಖಲು ಮಾಡಿ ಜೀವ ಉಳಿಸಿದ್ದಾರೆ.

ಪೊಲೀಸರು ತಮ್ಮ ಇಲಾಖೆಯ ಟೆಕ್ನಿಕಲ್ ತಜ್ಞರ ಸಹಾಯದಿಂದ ತಮಗೆ ಬಂದಿರುವ ಫೋನ್ ಕಾಲ್ ಹಾಗೂ ಇನ್ಸ್ಟಾದಲ್ಲಿ ಲೈವ್ ವಿಡಿಯೋದ ಫೋನ್ ಕಾಲ್ ಅನ್ನು ಟ್ರ್ಯಾಕ್ ಮಾಡಿದ್ದಾರೆ. ಬಳಿಕ ನಗರದಲ್ಲಿನ ಶಾಹದಾರದ ಛೋಟಾ ಠಾಕೂರ್ ದ್ವಾರದ ಮನೆಯೊಂದಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ವ್ಯಕ್ತಿಯನ್ನು ಬ್ಲೇಡ್ನಿಂದ ಕೈ ಸೇರಿದಂತೆ ದೇಹದ ಕೆಲ ಭಾಗಗಳನ್ನು ಕುಯ್ದುಕೊಂಡು ರಕ್ತ ಸೋರಿಕೆಯಾಗುತ್ತಿತ್ತು. ತಕ್ಷಣ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆತನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Scroll to Top