ಬೆಂಗಳೂರು, ಮೈಸೂರು, ಮುರುಡೇಶ್ವರ ರೈಲ್ವೆಯ ವೇಳಾ ಪಟ್ಟಿ ಬದಲಾವಣೆ

ಕುಂದಾಪುರ : ಬೆಂಗಳೂರು ಮೈಸೂರು ಮಂಗಳೂರಿಗೆ ಬರುತ್ತಿದ್ದ ನಿತ್ಯ ರೈಲನ್ನು ಮುರ್ಡೇಶ್ವರದ ವರೆಗೆ ವಿಸ್ತರಿಸಿದ್ದು, ವೇಳಾಪಟ್ಟಿಯಲ್ಲಿರುವ ವ್ಯತ್ಯಯ ಮತ್ತು ತಡವಾಗಿ ಪ್ರಯಾಣದ ಬಗ್ಗೆ ಬಿತ್ತರಿಸಿದ ವರದಿಗೆ ರೈಲ್ವೇ ಇಲಾಖೆ ಸ್ಪಂದಿಸಿದೆ.

ಆರಂಭದಲ್ಲಿ ವರದಿಗೆ ಸ್ಪಂದಿಸಿದ ಮೈಸೂರು ಸಂಸದ ರೈಲ್ವೇ ಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ತಕ್ಷಣ ಸ್ಪಂದಿಸಿದ ರೈಲು ಸಚಿವರು ಕೆಲವೇ ಘಂಟೆಗಳಲ್ಲಿ ರೈಲ್ವೆ ಬೋರ್ಡ್ ನಿಂದ ದಕ್ಷಿಣ ರೈಲ್ವೆಗೆ ಮಂಗಳೂರು ಮತ್ತು ಸುರತ್ಕಲ್ ನಡುವಿನ ಪ್ರಯಾಣವನ್ನು ತಗ್ಗಿಸಲು ಆದೇಶ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೀಗ ದಕ್ಷಿಣ ರೈಲ್ವೆ ಮತ್ತು ನೈರುತ್ಯ ರೈಲ್ವೆ ಗಳು ಜಂಟಿಯಾಗಿ ವೇಳಾಪಟ್ಟಿ ಸರಿಪಡಿಸುವತ್ತ ಕಾರ್ಯನಿರತರಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಕುಂದಾಪುರ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗಣೇಶ್ ಪುತ್ರನ್, ರೈಲ್ವೇ ವೇಳಾಪಟ್ಟಿಯಲ್ಲಿನ ಸಮಸ್ಯೆಗಳನ್ನು ವರದಿ ಮಾಡಿದ ಮಾಧ್ಯಮಗಳಿಗೆ, ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ರೈಲ್ವೇ ಸಚಿವರು ಮತ್ತು ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ.

ಬೆಂಗಳೂರು ಮೈಸೂರು ಮುರ್ಡೇಶ್ವರ ನಿತ್ಯ ರೈಲಿನ ವೇಳಾಪಟ್ಟಿಯ ಸಮಸ್ಯೆಗಳ ಬಗ್ಗೆ ವಿಸ್ತೃತ ವರದಿ ಬಿತ್ತರಿಸಲಾಗಿತ್ತು. ಮಂಗಳೂರಿನಿಂದ ಕುಂದಾಪುರಕ್ಕೆ ಈ ರೈಲು ವೇಳಾಪಟ್ಟಿಯ ಪ್ರಕಾರ ಬರೋಬ್ಬರಿ ನಾಲ್ಕು ಗಂಟೆಯ ಪ್ರಯಾಣವಾಗುತ್ತಿತ್ತು. ಮಂಗಳೂರಿನಿಂದ ಸುರತ್ಕಲ್ ಗೆ ಪ್ರಯಾಣದ ಸಮಯದಲ್ಲಿ ರೈಲ್ವೇ ಇಲಾಖೆ ಕೇರಳದ ಲಾಬಿಗೆ ಮಣಿದಿರುವ ಶಂಕೆಯೂ ವ್ಯಕ್ತವಾಗಿತ್ತು. ಇದೀಗ ಎರಡು ಗಂಟೆ ಅವಧಿಯಲ್ಲಿ ಮಂಗಳೂರಿನಿಂದ ಕುಂದಾಪುರಕ್ಕೆ ರೈಲು ಪ್ರಯಾಣಿಸಲಿದೆ ಎಂದು ತಿಳಿದು ಬಂದಿದೆ.

Scroll to Top