ಚೈತ್ರಾ ಹೆಸರಿನ ಜೊತೆಗೆ ಕುಂದಾಪುರ ಹೆಸರು ಬಳಸದಂತೆ ಕೋರ್ಟ್ ತಡೆಯಾಜ್ಞೆ..!!!

ಚೈತ್ರಾ ಹೆಸರಿನ ಜೊತೆಗೆ ಕುಂದಾಪುರ ಹೆಸರು ಬಳಸದಂತೆ ನಗರದ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಗಣೇಶ್​ ಶೆಟ್ಟಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರವಾಗಿ ಈ ತಡೆಯಾಜ್ಞೆ ಹೊರಡಿಸಿದೆ.

ಗಣೇಶ್​ ಶೆಟ್ಟಿ ಬೆಂಗಳೂರು ಹನುಮಂತ ನಗರದ ನಿವಾಸಿಯಾಗಿದ್ದು, ಸಾಮಾಜಿಕ ಜಾಲತಾಣ ಹಾಗೂ ಮಾದ್ಯಮಗಳಲ್ಲಿ ಕುಂದಾಪುರ ಹೆಸರು ತೆಗೆದುಹಾಕುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕಾರಣ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಅವರ ಸುದ್ದಿ ಪ್ರಸಾರ ಮಾಡುವಾಗ ಹೆಸರಿನ ಜೊತೆಗೆ ಕುಂದಾಪುರ ಹೆಸರನ್ನು ಬಳಸುವುದರಿಂದ ಕುಂದಾಪುರ ಊರಿನ ಹೆಸರಿಗೆ ಘಾಸಿಯಾಗುತ್ತದೆ ಎಂದು ಹೇಳಿದ್ದರು.

ಈ ಒಂದು ಘಟನೆಯಿಂದ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು. ಕುಂದಾಪುರ ದೇವಾಲಯಗಳಿರುವ ಮತ್ತು ಪ್ರಕೃತಿ ಸೊಬಗಿನ ಊರು. ಈ ಊರಿನ ಹೆಸರು ಆರೋಪಿಯೊಬ್ಬರ ಹೆಸರಿನ ಕೊನೆಯ ಭಾಗವಾಗಿರುವ ಕಾರಣಕ್ಕೆ ಹಾಳಾಗಬಾರದು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಇನ್ನು 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಮತ್ತು ತಂಡದ ವಿಚಾರಣೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು, ಈ ನಡುವೆ ಚೈತ್ರಾ ಪ್ರಕರಣದಲ್ಲಿ ಕುಂದಾಪುರ ಹೆಸರನ್ನು ಪದೇ ಪದೇ ಬಳಸುತ್ತಿರುವುದರಿಂದ ಇಲ್ಲಿನ ಸ್ಥಳೀಯರ ಭಾವನೆಗೆ ಧಕ್ಕೆಯಾಗುತ್ತಿರುವುದರಿಂದ ಮಾಧ್ಯಮಗಳಿಗೆ ಕುಂದಾಪುರ ಹೆಸರನ್ನು ಬಳಸದಂತೆ ನಿರ್ಬಂಧ ನೀಡುವಂತೆ ಗಣೇಶ್​ ಶೆಟ್ಟಿ ಕೋರ್ಟ್​ ಮೊರೆ ಹೋಗಿದ್ದರು. ಅದರಂತೆ ಕೋರ್ಟ್​ ತಡೆಯಾಜ್ಞೆ ವಿಧಿಸಿದ್ದು, ಎಲ್ಲರಿಗೂ ಸಮನ್ಸ್ ನೀಡಿದ್ದು, ಡಿಸೆಂಬರ್ 5ಕ್ಕೆ ಕಾಯ್ದಿರಿಸಿದ್ದಾರೆ. ಇನ್ನು ಗಣೇಶ್​ ಶೆಟ್ಟಿ ಸಲ್ಲಿಸಿದ ಅರ್ಜಿ ಪರವಾಗಿ ಹೈಕೋರ್ಟ್ ವಕೀಲ ಎಚ್. ಪವನಚಂದ್ರ ಶೆಟ್ಟಿ ವಾದಿಸಿದ್ದಾರೆ.

You cannot copy content from Baravanige News

Scroll to Top