ಈದ್ ಮಿಲಾದ್ ದಿನ ಧಕ್ಕೆಯಲ್ಲಿ ಮೀನು ವ್ಯಾಪಾರ ಮಾಡಿದ್ರೆ ಬಹಿಷ್ಕಾರ! ಹೊಸ ಚರ್ಚೆಗೆ ಕಾರಣವಾದ ಬ್ಯಾನರ್ : ಮಂಗಳೂರು ಧಕ್ಕೆಯಲ್ಲಿ ಷರಿಯತ್ ಕಾನೂನು ಜಾರಿಯಲ್ಲಿದ್ಯಾ..!??

ಮಂಗಳೂರು : ಹಸಿ ಮೀನು ಮಾರುವವರಿಗೆ ನೀಡಿರುವ ಎಚ್ಚರಿಕೆ ಬ್ಯಾನರೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಈದ್ ಮಿಲಾದ್ ದಿನವಾದ ಸೆ. 28ರಂದು ಮೀನು ಮಾರಾಟ ಮಾಡಬಾರದು, ಅಂದು ವ್ಯಾಪಾರಸ್ಥರು ಕಡ್ಡಾಯ ರಜೆ ಮಾಡಬೇಕು ಅಂತ ಹೊರಡಿಸಿದ ಕಟ್ಟಪ್ಪಣೆ ಚರ್ಚೆಗೆ ನಾಂದಿ ಹಾಡಿದೆ.

”ಧರ್ಮ ದಂಗಲ್”

ಜಾತ್ರೆ, ಸಂತೆ ವಿಚಾರದಲ್ಲಿ ಶುರುವಾದ ತಕರಾರು ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತು. ಈಗ ಮಂಗಳೂರಿನಲ್ಲಿ ಮತ್ತೆ ಪೋಸ್ಟರ್ ಕಾಣಿಸಿದೆ. ಆದ್ರೆ, ಈ ಸಲ ಹಾಕಿರುವ ಪೋಸ್ಟರ್ ಹೊಸ ಚರ್ಚೆ ಹುಟ್ಟು ಹಾಕಿದೆ. ಈ ಪೋಸ್ಟರ್ ಕೂಡ ವ್ಯಾಪಾರ ಸಮರಕ್ಕೆ ವೇದಿಕೆ ಕಲ್ಪಿಸಿದೆ.



ಈದ್ ದಿನ ಧಕ್ಕೆಯಲ್ಲಿ ವ್ಯಾಪಾರ ಮಾಡಿದ್ರೆ ಬಹಿಷ್ಕಾರ..!!

ಹೌದು ಇದೊಂದು ಪೋಸ್ಟರ್ ಈಗ ಭಾರೀ ಸದ್ದು ಮಾಡ್ತಿದೆ. ಕಡಲೂರು ಮಂಗಳೂರಿನಲ್ಲಿ ಧರ್ಮ ದಂಗಲ್ ಪುನರ್ಜನ್ಮ ಪಡೆದಿದೆ. ಕಳೆದ ಬಾರಿ ಉಡುಪಿಯಲ್ಲಿ ಶಿರವಸ್ತ್ರದಿಂದ ಶುರುವಾಗಿದ್ದ ಧರ್ಮ ಯುದ್ಧ, ಹಲವು ಸುತ್ತು ಸುತ್ತಿ ಬಂದಿತ್ತು. ಈಗ ಪೋಸ್ಟರ್ ವಾರ್ಗೆ ಮಂಗಳೂರಿನಿಂದ ಚಾಲನೆ ಸಿಕ್ಕಿದೆ. ಈದ್‌ ಮಿಲಾದ್‌ ಹಿನ್ನೆಲೆಯಲ್ಲಿ ನಗರದ ಧಕ್ಕೆ ಮೀನುಗಾರಿಕಾ ಬಂದರಿನಲ್ಲಿ ಹಾಕಲಾದ ಬ್ಯಾನರೊಂದು ಈಗ ವಿವಾದಕ್ಕೆ ಕಾರಣವಾಗಿದೆ.

ಬ್ಯಾನರ್ ಅಳವಡಿಸಿದವ್ರ ವಿರುದ್ಧ ಕ್ರಮಕ್ಕೆ ಹೆಚ್ಚಿದ ಆಗ್ರಹ

ಮಂಗಳೂರಿನ ಮೀನುಗಾರಿಕಾ ಬಂಧನದಲ್ಲಿ ಅಳವಡಿಸಿರುವ ಈ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡ್ತಿದೆ. ಅಳವಡಿಸಿದ ಬ್ಯಾನರ್‌ನ್ನ ತಕ್ಷಣ ತೆರವುಗೊಳಿಸಿ ಅಂತ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ. ಅಲ್ಲದೆ, ಕಾನೂನು ಕ್ರಮ ಕೈಗೊಳ್ಳಿ ಅಂತ ಪೊಲೀಸರನ್ನ ಆಗ್ರಹಿಸಿವೆ.

ಬ್ಯಾನರ್‌ನಲ್ಲಿ ಏನಿದೆ..!??

ಹಸಿ ಮೀನು ವ್ಯಾಪಾರಿಗಳ ಗಮನಕ್ಕೆ ಮುಂಬರುವ ಈದ್ ಮಿಲಾದ್ ರಜೆಯ ಬಗ್ಗೆ ಸೂಚನೆ. ವ್ಯಾಪಾರಸ್ಥರ ಸಂಘದ ನಿರ್ಧಾರದಂತೆ ತಾರೀಕು, 28-09-2023ನೇ ಮುಂಜಾನೆ 3:45ರ ನಂತರ ಹಸಿ ಮೀನು ವ್ಯಾಪಾರಿಗಳು ವ್ಯಾಪಾರವನ್ನು ಮಾಡದೆ ಕಡ್ಡಾಯವಾಗಿ ರಜೆ ಮಾಡಬೇಕು. ರಜೆ ಮಾಡದೆ ಕಾನೂನನ್ನು ಉಲ್ಲಂಘಿಸಿದ್ದಲ್ಲಿ 1 ತಿಂಗಳ ಕಾಲ ಆ ವ್ಯಕ್ತಿಯು ಬಂದರು ಧಕ್ಕೆಯಲ್ಲಿ ವ್ಯಾಪಾರ ಮಾಡದಂತೆ ಸಂಘವು ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ದಂಡನೆ ವಿಧಿಸಬೇಕಾಗುತ್ತದೆ. ಹಾಗೂ ಸವಲತ್ತುಗಳಿಂದ ವಂಚಿತರಾಗಬೇಕಾಗುತ್ತದೆ. ಆದ್ದರಿಂದ ತಪ್ಪದೇ ಕಾನೂನನ್ನು ಪಾಲಿಸಬೇಕಾಗಿ ವಿನಂತಿ.
– ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಹಸಿ ಮೀನು ವ್ಯಾಪಾರಸ್ಥರ ಸಂಘ

ಧಕ್ಕೆಯಲ್ಲಿ ಷರಿಯತ್ ಕಾನೂನು ಜಾರಿಯಲ್ಲಿದ್ಯಾ? ವಿಹೆಚ್ಪಿ ಮುಖಂಡ ಶರಣ್‌ ಪಂಪ್‌ವೆಲ್‌ ಪ್ರಶ್ನೆ

ಬ್ಯಾನರ್ ಅಳವಡಿಕೆ ವಿರುದ್ಧ ವಿಹೆಚ್ಪಿ ಕಿಡಿಕಾರಿದೆ.. ವಿಹೆಚ್ಪಿ ಜಂಟಿ ಕಾರ್ಯದರ್ಶಿ ಶರಣ್ ಪಂಪ್ವೆಲ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಧಕ್ಕೆಯಲ್ಲಿ ಹಾಕಿರುವ ಬ್ಯಾನರ್‌ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಷರಿಯತ್ ಕಾನೂನು ಜಾರಿಯಲ್ಲಿದ್ಯಾ?

‘ಧಕ್ಕೆಯಲ್ಲಿ ದಂಡನೆ ವಿಧಿಸಲು ಷರಿಯತ್‌ ಕಾನೂನು ಜಾರಿಯಲ್ಲಿದೆಯಾ? ಇವರ ಬೆದರಿಕೆಯ ತಂತ್ರಗಳಿಗೆ ಹಿಂದೂ ಮೀನುಗಾರರೂ ಮಣಿಯಬಾರದು. ನಿಮ್ಮೊಂದಿಗೆ ಹಿಂದೂ ಸಮಾಜ ಇದೆ. ಪೊಲೀಸ್‌ ಇಲಾಖೆ ತಕ್ಷಣ ಈ ಬ್ಯಾನರ್‌ ಹಾಕಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿ’
– ಶರಣ್ ಪಂಪ್ವೆಲ್, ವಿಹೆಚ್.ಪಿ ಮುಖಂಡ

ಕಳೆದೆರಡು ವರ್ಷಗಳಿಂದ ಜಾತ್ರೆಯ ಸೀಸನ್ ಪ್ರಾರಂಭವಾದಗ ದೇವಸ್ಥಾನದ ಸುತ್ತಮುತ್ತ ಈ ರೀತಿಯ ಪೋಸ್ಟರ್ಗಳು ಕಾಣಿಸಿದ್ದಿದೆ. ಹಿಂದೂ ಧರ್ಮೀಯರನ್ನ ಹೊರತುಪಡಿಸಿ ಅನ್ಯಮತೀಯರು ವ್ಯಾಪಾರ ನಡೆಸಬಾರದು ಎಂಬ ಬ್ಯಾನರ್ಗಳು ವಿವಾದ ಸೃಷ್ಟಿಸಿತ್ತು.

ಮಂಗಳೂರಿನ ಕಾವೂರು, ಬಪ್ಪನಾಡು, ಉಡುಪಿಯ ಕಾಪು, ಪುತ್ತೂರು ಸೇರಿ ಹಲವೆಡೆ ಈ ಬ್ಯಾನರ್ ಪ್ರತ್ಯಕ್ಷವಾಗಿದ್ದವು. ಇದೀಗ ಹಸಿಮೀನು ವ್ಯಾಪಾರಸ್ಥರ ಸಂಘದ ಹೆಸರಿನಲ್ಲಿ ಬಿದ್ದಿರುವ ಈ ಬ್ಯಾನರ್ ಸಹ ಚರ್ಚೆಗೆ ಗ್ರಾಸವಾಗಿದೆ.

You cannot copy content from Baravanige News

Scroll to Top