ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕುಕ್ಕರ್, ಐರನ್ ಬಾಕ್ಸ್ ಹಂಚಿಕೆ ವಿಧಾನಸಭಾ ಎಲೆಕ್ಷನ್ಗೆ ಸಹಾಯವಾಯ್ತು ಎಂದು ಕಾರ್ಯಕ್ರಮವೊಂದರಲ್ಲಿ ಯತೀಂದ್ರ ಹೇಳಿದ್ದರು.
ಇದೀಗ ಇದೇ ಹೇಳಿಕೆ ವಿಚಾರವಾಗಿ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಬಿಜೆಪಿ ನಾಯಕ ಭಾಸ್ಕರ್ ರಾವ್ ನೇತೃತ್ವದಲ್ಲಿ ಎ.ಎನ್ ರಂಗು ಎಂಬುವವರ ಮೂಲಕ ಬಿಜೆಪಿ ದೂರು ದಾಖಲಿಸಿದೆ.
15-09-2023 ರಂದು ಮಡಿವಾಳ ಸಮಾಜದ ಸಮುದಾಯ ಭವನ ಉದ್ಘಾಟನೆ ವೇಳೆ ಸಿಎಂ ಪುತ್ರ ಯತೀಂದ್ರ ಕುಕ್ಕರ್ ಹಾಗೂ ಐರನ್ ಬಾಕ್ಸ್ ಹಂಚಿರುವ ಬಗ್ಗೆ ಸಭೆಯಲ್ಲಿ ಮಾತನಾಡಿದ್ದರು.
ಕಾನೂನು ಉಲ್ಲಂಘಿಸಿ ಮತದಾರರಿಗೆ ಆಮಿಷ ತೋರಿ ಪಕ್ಷಕ್ಕೆ ಮತ ಹಾಕಿಸಿಕೊಂಡಿದ್ದಾರೆ. ಈ ಖರ್ಚು-ವೆಚ್ಚ ಚುನಾವಣೆಯ ಲೆಕ್ಕದಲ್ಲಿ ತೋರಿಸಿಲ್ಲ. ಇದು ಕಾನೂನು ಪ್ರಕಾರ ಅಪರಾಧವಾಗಿದೆ. ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪಾರದರ್ಶಕವಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಡಿವೈಎಸ್ಪಿ ಗೋವಿಂದರಾಜ್, ದೂರನ್ನು ಸ್ವೀಕರಿಸಿದ್ದಾರೆ.
ಡಾ.ಯತೀಂದ್ರ ಸಿದ್ದರಾಮಯ್ಯ ಏನ್ ಹೇಳಿದ್ದರು..?
ನಮ್ಮ ನಂಜಪ್ಪ ಅವರು.. ರಾಜ್ಯಾಧ್ಯಕ್ಷರು ಚುನಾವಣಾ ಸಂದರ್ಭದಲ್ಲಿ.. ವರುಣಾಕ್ಷೇತ್ರದಲ್ಲಿ.. ಮಡಿವಾಳ ಸಮುದಾಯವನ್ನು ಸಂಘಟನೆ ಮಾಡಬೇಕು ಎಂದು ಹೇಳಿ ಸಾವಿರಾರು ಜನರನ್ನು ಸೇರಿಸಿ ಅವರೆಲ್ಲರಿಗೂ ಕುಕ್ಕರ್ ಮತ್ತು ಐರನ್ ಬಾಕ್ಸ್ ಕೊಡುವಂತಹ ಕಾರ್ಯಕ್ರಮ ಮಾಡಿದ್ದರು. ಇದು ನಮಗೆ ಅನುಕೂಲ ಆಗಲಿ ಎಂದು ಮಾಡಿದ್ದರು. ತಂದೆಯವರು ತುಂಬಾ ಬ್ಯೂಸಿ ಇದ್ದರು, ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಎರಡ್ಮೂರು ಸಲ ಬಂದರು, ದಿನಾಂಕ ತೆಗೆದುಕೊಂಡರು. ಆದರೂ ಕ್ಯಾನ್ಸಲ್ ಆಯಿತು. ಹಾಗಿದ್ದೂ ಪಟ್ಟು ಬಿಡದೇ ಆ ಕಾರ್ಯಕ್ರಮ ಯಶಸ್ವಿ ಆಯಿತು. ನಮ್ಮ ತಂದೆಯವರು ಬಂದಿದ್ದರು, ನಂಜಪ್ಪ ಅವರು ಅವರ ಕೈಯಲ್ಲೇ ಈ ಕುಕ್ಕರ್ ಮತ್ತು ಐರನ್ ಬಾಕ್ಸ್ ಕೊಡಿಸಿದರು. ವರುಣಾ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದ ವೋಟ್ ಹೆಚ್ಚು ನಮಗೆ ಬರುವಂತೆ ಮಾಡಿದರು- ಡಾ.ಯತೀಂದ್ರ ಸಿದ್ದರಾಮಯ್ಯ