ಉಡುಪಿ: ಗಾಂಜಾ ಸೇವಿಸಿ ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿ; ಆರೋಪಿಯ ಬಂಧನ..!

ಉಡುಪಿ, ಸೆ.26: ಗಾಂಜಾ ಸೇವನೆ ಮಾಡಿದ ವ್ಯಕ್ತಿಯೋರ್ವ ಪಕ್ಕದ ಮನೆಗೆ ಕಲ್ಲೆಸೆದು ಬಳಿಕ ಮನೆ ಮುಂದೆ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ ಘಟನೆ ಉಡುಪಿಯ ನಿಟ್ಟೂರು ಹನುಮಂತ ನಗರದಲ್ಲಿ ನಡೆದಿದೆ.

ಅತಿರೇಕದ ವರ್ತನೆ ತೋರಿದ ವ್ಯಕ್ತಿಯನ್ನು ಖಲೀಮ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.

ನಿನ್ನೆ ಸಂಜೆ ನಿಟ್ಟೂರು ಹನುಮಂತ ನಗರದ ದಿವಾಕರ ಬೆಲ್ಚಡ ಅವರ ಹಂಚಿನ ಮನೆಯ ಛಾವಣಿಗೆ ಪಕ್ಕದ ಮನೆಯ ಖಲೀಮ್ ಕಲ್ಲು ಎಸೆದು ದಾಂಧಲೆ ನಡೆಸಿದ್ದಾನೆ.

ಈ ಸಂದರ್ಭದಲ್ಲಿ ದಿವಾಕರ್‌ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆಗ ಪೊಲೀಸರು ಸ್ಥಳಕ್ಕೆ ತೆರಳಿ ಖಲೀಮ್‌ ಗೆ ಎಚ್ಚರಿಕೆ ನೀಡಿ ತೆರಳಿದ್ದಾರೆ.

ಆದರೆ ಪೊಲೀಸರು ಹಿಂದಿರುಗಿ ಹೋದ ಬಳಿಕ ತಡ ರಾತ್ರಿ ವೇಳೆ ಖಲೀಮ್‌ ಪುನ: ಬಂದು ದಿವಾಕರ ಅವರು ತನ್ನ ಮನೆ ಬಳಿ ನಿಲ್ಲಿಸಿದ್ದ ರಿಕ್ಷಾಕ್ಕೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ದಿವಾಕರ್‌ ಮನೆಯವರು ಮತ್ತು ಅಕ್ಕಪಕ್ಕದ ಮನೆ ಮಂದಿ ಎಚ್ಚರಗೊಂಡು ನೀರು ಹಾಕುವಷ್ಟರಲ್ಲಿ ರಿಕ್ಷಾ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಉಡುಪಿ ನಗರ ಠಾಣೆಯ ಪೊಲೀಸರು ಖಲೀಮ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಒಂದೊಮ್ಮೆ ಸಂಜೆ ವೇಳೆ ದಿವಾಕರ್‌ ಮನೆಗೆ ಬಂದಿದ್ದ ಪೊಲೀಸರು ಆರೋಪಿ ಖಲೀಮ್‌ ನನ್ನು ಆಗಲೇ ಕರೆದುಕೊಂಡು ಹೋಗಿರುತ್ತಿದ್ದರೆ ಆತ ರಿಕ್ಷಾಕ್ಕೆ ಬೆಂಕಿ ಹಚ್ಚುವ ಘಟನೆಗೆ ಮುಂದಾಗುತ್ತಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಆಟೋ ರಿಕ್ಷಾ ಸಂಪೂರ್ಣ ಸುಟ್ಟು ಹೋಗಿದ್ದು, ದಿವಾಕರ್‌ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಜೀವನಕ್ಕೆ ಆಧಾರವಾಗಿದ್ದ ಆಟೋ ರಿಕ್ಷಾವನ್ನೇ ಅವರು ಕಳೆದುಕೊಂಡಿದ್ದಾರೆ.

You cannot copy content from Baravanige News

Scroll to Top