ಉಡುಪಿ: ಮೂರು ಅಥವಾ ನಾಲ್ಕು ದಿನದಲ್ಲಿ ಜಿಲ್ಲೆಯ ಮರಳು ಸಮಸ್ಯೆ ಹಾಗೂ ಲಾರಿ, ಟೆಂಪೋ ಮಾಲಕರ ಪರವಾನಿಗೆ ಸಮಸ್ಯೆ/ಗೊಂದಲ ಬಗೆಹರಿಸಬೇಕು. ಇಲ್ಲವಾದರೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದಿರು ಎಲ್ಲ ಶಾಸಕರು ಸೇರಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಮಾಜಿ ಸಚಿವರಾದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶಾಸಕರಾದ ಗುರುರಾಜ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಕಿರಣ್ ಕೊಡ್ಗಿಯವರೊಂದಿಗೆ ಬುಧವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿದ ಅವರು, ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಹೆಚ್ಚಾಗಿದೆ. ಲಾರಿ, ಟೆಂಪೋ ಮಾಲಕರು ಮುಷ್ಕರ ಆರಂಭಿಸಿದ್ದಾರೆ. ನಿರ್ಮಾಣ ವಲಯ ಸೇರಿದಂತೆ ರೈತರಿಗೂ ಮಣ್ಣು, ಕಲ್ಲು ಸಾಗಿಸುವುದು ಸಮಸ್ಯೆಯಾಗುತ್ತಿದೆ. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಸಮಸ್ಯೆಯ ಗಂಭೀರತೆಯನ್ನು ಅರಿತು ಮಧ್ಯ ತತ್ ಕ್ಷಣ ಪರಿಹಾರ ಸೂಚಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಧರಣಿ ಆರಂಭಿಸಲಿದ್ದೇವೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.