ಕಾವೇರಿ ಕನ್ನಡಿಗರ ಜೀವನದಿ. ಕಾವೇರಿ ನದಿಯನ್ನೇ ನಂಬಿ ಅದೆಷ್ಟೋ ಜೀವಸಂಕುಲಗಳು ಬದುಕುತ್ತಿವೆ. ಆದರಿಂದು ಅದೇ ನೀರಿಗಾಗಿ ಹೋರಾಟ ನಡೆಯುತ್ತಿದೆ. ಗತ ಕಾಲದಿಂದಲೂ ಮುಂದುವರಿದು ಕಾವೇರಿ ನಮ್ಮದು ಎಂದು ಕನ್ನಡಿಗರು ಹೇಳುತ್ತಾ ಬಂದಿದ್ದಾರೆ. ಆದರೆ ಕೊಡಗಿನಲ್ಲಿ ಹುಟ್ಟಿ ತಮಿಳುನಾಡಿನತ್ತ ಸಾಗಿ ಬಂಗಾಳಕೊಲ್ಲಿಯನ್ನು ಸೇರುವ ಕನ್ನಡಿಗರ ಜೀವನದಿಗೆ ಇತಿಹಾಸವಿದೆ. ಪುರಾಣದ ನಂಟಿದೆ. ಆ ನಂಟನ್ನು ಬ್ರಹ್ಮ ಗೀಚಿದನೇ? ತಿಳಿಯೋಣ.
ಬ್ರಹ್ಮನ ಮಗಳಾದ ಲೋಪಮುದ್ರಾ ಲೋಕೊದ್ಧಾರಕ್ಕಾಗಿ ಭೂಲೋಕದಲ್ಲಿ ವಾಸಿಸುತ್ತಿದ್ದಳು. ಕುವೇರನೆಂಬ ಮುನಿಯು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ಬ್ರಹ್ಮನಿಂದ ವರ ಪಡೆಯುತ್ತಾನೆ. ನದಿಯ ಉಗಮಕ್ಕಾಗಿ ಮುನಿ ಸೂಕ್ತವಾದ ಜಾಗವನ್ನು ಹುಡುಕುತ್ತಿರುತ್ತಾನೆ. ಆದರೆ ಈ ವಿಚಾರ ಗಣೇಶನಿಗೆ ತಿಳಿಯುತ್ತದೆ. ಗಣೇಶ ಇಲ್ಲೊಂದು ಜಾಗ ಸೂಕ್ತವಾಗಿದೆ ಎಂದು ಕಮಂಡಲವನ್ನು ನಿರ್ಮಿಸುತ್ತಾನೆ.
ಆದರೆ ಅಲ್ಲೇ ಇದ್ದ ಕಾಗೆಯೊಂದು ಕಮಂಡಲವನ್ನು ಮುಟ್ಟುವಂತೆ ಕುಳಿತುಕೊಂಡಿರುತ್ತದೆ. ಇದನ್ನು ಕಂಡ ಅಗಸ್ತ್ಯ ಮುನಿಗಳು ಕಾಗೆಯನ್ನು ಕಂಡು ಓಡಿಸಲು ಪ್ರಯತ್ನಿಸುತ್ತಾರೆ. ಓಡಿಸುವ ಧಾವಂತದಲ್ಲಿ ಕಮಂಡಲ ಮೇಲೆ ನೀರು ಚೆಲ್ಲುತ್ತದೆ. ಸಣ್ಣ ಪ್ರಮಾಣದಲ್ಲಿ ಜಲ ಉದ್ಭವವಾಗುತ್ತದೆ. ಆ ಉದ್ಭವವಾದ ಜಾಗವೇ ಕೊಡಗಿನ ತಲಕಾವೇರಿಯಾಗಿದೆ.
ಕಾವೇರಿಯನ್ನು ತಮಿಳುನಾಡಿನತ್ತ ಹರಿಸಿದ ಅಗಸ್ತ್ಯ
ಕಾವೇರಿ ಬಗ್ಗೆ ಪುರಾಣದಲ್ಲಿ ನಾನಾ ಕಥೆಗಳಿವೆ. ಅದರಲ್ಲೂ ಕಾವೇರಿ ನದಿಯ ಹುಟ್ಟು ಹಾಗೂ ಅದನ್ನು ತಮಿಳುನಾಡಿನತ್ತ ಹರಿಸಿದ ಕೀರ್ತಿ ಅಗಸ್ತ್ಯನ ಮೇಲಿದೆ. ಒಂದು ಕಥೆಯ ಪ್ರಕಾರ, ಉತ್ತರದಿಂದ ದಕ್ಷಿಣದತ್ತ ಬಂದ ಅಗಸ್ತ್ಯನಿಗೆ ತಮಿಳುನಾಡಿನಲ್ಲಿ ಯಾವುದೇ ನೀರಿನ ಮೂಲಗಳು ಕಾಣಿಸಿಲ್ಲ. ಹಾಗಾಗಿ ಅಲ್ಲಿ ಜನರು ನೆಲೆಸಬೇಕಾದರೆ ನೀರಿನ ಅವಶ್ಯಕತೆ ಇದೆ ಎಂದು ಕೊಡಗಿನಲ್ಲಿ ಹರಿಯುತ್ತಿದ್ದ ಕಾವೇರಿಯನ್ನ ತಮಿಳುನಾಡಿನತ್ತ ತಿರುಗಿಸಿದ್ದು ಅಗಸ್ತ್ಯ ಎಂದು ಪುರಾಣಗಳಲ್ಲಿ ಹೇಳಲಾಗುತ್ತಿದೆ.