ಗಂಡ-ಹೆಂಡತಿ ಜಗಳಲ್ಲಿ ಕೂಸು ಬಡವಾಯಿತು ಅನ್ನೋ ಹಾಗೆ, ಮಗುವಿನ ಹೆಸರಿಡುವ ವಿಚಾರದಲ್ಲಿ ತಂದೆ-ತಾಯಿ ಮಧ್ಯೆ ಒಮ್ಮತ ಮೂಡದಿದ್ದಕ್ಕೆ ಅಂತಿಮವಾಗಿ ನ್ಯಾಯಾಲಯವೇ ನಾಮಕರಣ ಮಾಡಿದ ಅಪರೂಪದ ಪ್ರಸಂಗ ನಡೆದಿದೆ.
ಕೇರಳದ ದಂಪತಿಗೆ ಫೆಬ್ರವರಿ 12, 2020ರಲ್ಲಿ ಮಗು ಜನಿಸಿತ್ತು.
ಮಗು ಹುಟ್ಟಿದ ಬೆನ್ನಲ್ಲೇ ದಂಪತಿ ಪ್ರತ್ಯೇಕವಾಗಿ ವಾಸಿಸಲು ಶುರುಮಾಡಿತ್ತು. ಪರಿಣಾಮ ಮಗು ಅಮ್ಮನ ಆಶ್ರಯ ಪಡೆದಿತ್ತು. ಇಬ್ಬರು ಗಂಡ-ಹೆಂಡತಿಯ ಕಿತ್ತಾಟದಿಂದಾಗಿ ನಾಲ್ಕು ವರ್ಷ ಆಗುತ್ತ ಬಂದರೂ ಮಗುವಿಗೆ ನಾಮಕರಣ ಮಾಡಿರಲಿಲ್ಲ.
ನಾಮಕರಣ ವಿಚಾರದಲ್ಲಿ ಇಬ್ಬರಿಗೂ ಒಮ್ಮತ ಮೂಡದ ಹಿನ್ನೆಲೆಯಲ್ಲಿ, ಮಗುವಿನ ತಾಯಿ ಕೊನೆಗೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೋರ್ಟ್.. ಗಂಡ-ಹೆಂಡತಿ ಇಬ್ಬರನ್ನೂ ಮನವೊಲಿಸುವ ಪ್ರಯತ್ನ ಮಾಡಿದೆ. ಆದರೆ ಅದು ಫಲಿಸದಿದ್ದಾಗ, ಮಗುವಿಗೆ ಪುಣ್ಯ ಎಂದು ಕೋರ್ಟ್ ನಾಮಕರಣ ಮಾಡಿದೆ.
ನ್ಯಾಯಮೂರ್ತಿಗಳು ಹೇಳಿದ್ದೇನು..?
ಮಗು ತಾಯಿ ಜೊತೆ ವಾಸಿಸುತ್ತಿರುವ ಕಾರಣ ಆಕೆ ಸೂಚಿಸಿದ ಹೆಸರಿಗೆ ಹೆಚ್ಚು ಪ್ರಾಮುಖ್ಯತೆ ಸಿಗಲಿದೆ. ಈ ಪ್ರಕರಣದಲ್ಲಿ ಪಿತೃತ್ವದ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲದಿರುವುದರಿಂದ ಮಗುವಿಗೆ ತಂದೆಯ ಹೆಸರನ್ನೂ ಸೇರಿಸಬೇಕು. ಒಂದು ಮಗುವಿಗೆ ಹೆಸರು ಇಡುವಾಗ ಆಕೆಯ ಬೆಳವಣಿಗೆಯನ್ನು ಪರಿಗಣಿಸಬೇಕೇ ಹೊರತು ತಂದೆ-ತಾಯಿ ಬಯಕೆ ಅಲ್ಲ. ಜೊತೆಗೆ ಸಾಮಾಜಿಕ ಪರಿಗಣನೆಯನ್ನು ಇಲ್ಲಿ ತೆಗೆದುಕೊಳ್ಳುವುದಿಲ್ಲ. ಪೇರೆಂಟ್ಸ್ ಪೇಟ್ರಿ ಏ ಕಾಯ್ದೆ ಪ್ರಕಾರ, ಕೋರ್ಟ್ ಮಗುವಿಗೆ ಹೆಸರನ್ನು ಸೂಚಿಸುತ್ತದೆ ಎಂದು ನ್ಯಾಯಮೂರ್ತಿ ಬೇಚು ಕುರಿಯನ್ ಥಾಮಸ್ ಅಭಿಪ್ರಾಯಪಟ್ಟರು. ಕೊನೆಗೆ ಮಗುವಿಗೆ ಪುಣ್ಯ ಎಂದು ನಾಮಕರಣ ಮಾಡಿ, ತಂದೆ ಉಪನಾಮವನ್ನು ಸೇರಿಸಲು ಸೂಚಿಸಿದೆ.