‘ಸಪ್ತಪದಿ’ ಯೋಜನೆ ಮರು ಆರಂಭ; ಏನಿದು ಯೋಜನೆ..?

ಉಡುಪಿ, ಅ.04: ಮದುವೆಗೆ ದುಂದುವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಮುಜರಾಯಿ ಇಲಾಖೆ 2021ರಲ್ಲಿ ರಾಜ್ಯಾದ್ಯಂತ ಜಾರಿಗೆ ತಂದಿದ್ದ “ಸಪ್ತಪದಿ’ ಯೋಜನೆ ಮುಂದುವರಿಯುವ ಸೂಚನೆ ಲಭಿಸಿದೆ.

ಬಿಜೆಪಿ ಸರಕಾರದಲ್ಲಿ ಮುಜರಾಯಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರ ಮುತುವರ್ಜಿಯಿಂದ “ಸಪ್ತಪದಿ’ ಆರಂಭವಾಗಿತ್ತು. ಹೊಸ ಸರಕಾರ ಈ ಯೋಜನೆ ಮುಂದುವರಿಸುವ ಬಗ್ಗೆ ಇದುವರೆಗೂ ಯಾವುದೇ ಸೂಚನೆ ಹೊರಡಿಸಿರಲಿಲ್ಲ. ಆದರೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಯೋಜನೆ ಮುಂದುವರಿಸುವ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರು ವುದು ಯೋಜನೆಯ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಎಳೆದಂತಾಗಿದೆ.

ಏನಿದು ಯೋಜನೆ?
ವಧು-ವರನಿಗೆ ಉಡುಗೆ, ಬಂಗಾರದ ಉಡುಗೊರೆ ನೀಡುವ ಜತೆಗೆ ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ದೇಗುಲಗಳ ಆಡಳಿತ ಮಂಡಳಿಗಳೇ ಮಾಡುತ್ತಿದ್ದವು. ಮದುಮಗನಿಗೆ ಅಂಗಿ, ಧೋತಿ ಹಾಗೂ 5 ಸಾವಿರ ರೂ.ನಗದು ಸಹಾಯ, ವಧುವಿಗೆ ಸೀರೆ, 1 ಸಾವಿರ ರೂ.ನಗದು ಮತ್ತು ಮಾಂಗಲ್ಯ ಸೂತ್ರಕ್ಕಾಗಿ 8 ಗ್ರಾಂ ಚಿನ್ನವನ್ನು ನೀಡಲಾಗುತ್ತಿತ್ತು. ವಧು ಮತ್ತು ವರರಿಬ್ಬರಿಗೂ ಒಟ್ಟು ಸಹಾಯದ ಮೊತ್ತ ಸುಮಾರು 55 ಸಾವಿರ ರೂ.ಆಗುತ್ತಿದ್ದು, ಪ್ರತೀ ಜೋಡಿಗೆ ಮದುವೆ ಸಮಾರಂಭಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ದೇವಸ್ಥಾನಗಳಿಗೆ ಸರಕಾರದ ವತಿಯಿಂದ 55 ಸಾವಿರ ರೂ.ನೀಡಲಾಗುತ್ತಿತ್ತು.

ಕೋಟ್ಯಂತರ ರೂ. ವೆಚ್ಚ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಈ ಯೋಜನೆಗಾಗಿ 13,95,293 ರೂ., ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ 32,92,591 ರೂ., ಕಮಲಶಿಲೆಯ ಶ್ರೀ ಬ್ರಾಹ್ಮಿà ದುರ್ಗಾಪರಮೇಶ್ವರೀ ದೇವಸ್ಥಾನ 1,50,000 ರೂ., ನೀಲಾವರದ ಶ್ರೀ ಮಹಿಷಮರ್ದಿನಿ ದೇವಸ್ಥಾನ 1,17,265 ರೂ., ಕೋಟದ ಶ್ರೀ ಅಮೃತೇಶ್ವರೀ ದೇವಸ್ಥಾನ 8,19,024 ರೂ., ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ 17,26,172 ರೂ.ಗಳನ್ನು ಇದಕ್ಕಾಗಿ ವಿನಿಯೋಗಿಸಿದೆ.

ಉಡುಪಿಯಲ್ಲಿ 153 ಜೋಡಿ ವಿವಾಹ
ಸಪ್ತಪದಿ ಯೋಜನೆಯ ಅನ್ವಯ 2021ರಿಂದ 2023ರ ಮಾರ್ಚ್‌ ತಿಂಗಳವರೆಗೆ ಕೊಲ್ಲೂರು ಶ್ರೀ ಮೂಖಾಂಬಿಕಾ ದೇವಸ್ಥಾನದಲ್ಲಿ ಇದುವರೆಗೆ 23 ಜೋಡಿ, ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 76, ಕಮಲಶಿಲೆಯ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 3, ನೀಲಾವರದ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ 2, ಕೋಟದ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ 12, ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ 37 ಜೋಡಿ ವಿವಾಹವಾಗಿದ್ದಾರೆ.

ಸಪ್ತಪದಿ ಯೋಜನೆಯ ಬಗ್ಗೆ ಹಲವಾರು ಮಂದಿ ವಿಚಾರಿಸುತ್ತಿದ್ದಾರೆ. ಆದರೆ ಯೋಜನೆಯನ್ನು ಮುಂದುವರಿಸುವ ಬಗ್ಗೆ ಇದುವರೆಗೂ ಸರಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಬಂದಲ್ಲಿ ಎಲ್ಲ ಅಗತ್ಯಕ್ರಮಗಳನ್ನು ತೆಗೆದುಕೊಳ್ಳುವಂತೆ ದೇವಸ್ಥಾನಗಳಿಗೆ ಸೂಚಿಸಲಾಗುವುದು.

Scroll to Top