ಶಿವಮೊಗ್ಗ ಗಲಭೆ ಬೆನ್ನಲ್ಲೆ ಮುನ್ನೆಚ್ಚರಿಕಾ ಕ್ರಮವಾಗಿ ಉಡುಪಿಯಲ್ಲಿ ಅನಧಿಕೃತ ಬ್ಯಾನರ್ ತೆರವು….!!

ಉಡುಪಿ : ಶಿವಮೊಗ್ಗದ ಈದ್ ಮಿಲಾದ್ ಘಟನೆ ಬೆನ್ನಲ್ಲೆ ಎಚ್ಚೆತ್ತುಕೊಂಡು ಉಡುಪಿ ಜಿಲ್ಲಾಡಳಿತ ಇದೀಗ ನದರದಲ್ಲಿ ಹಾಕಲಾಗಿದ್ದ ಎಲ್ಲಾ ಅನಧಿಕೃತ ಬ್ಯಾನರ್ ಗಳನ್ನು ತೆರವುಗೊಳಿಸಿದೆ. ಇದರ ಎಫೆಕ್ಟ್ ಉಡುಪಿಯಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದ ಮೇಲೆ ಬಿದ್ದಿದ್ದು, ಹಿಂದೂ ಸಮಾಜೋತ್ಸವದ ಸುಮಾರು 30ಕ್ಕೂ ಹೆಚ್ಚು ಬ್ಯಾನರ್‌ಗಳನ್ನು ತೆಗೆದು ಹಾಕಲಾಗಿದ್ದು, ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಶಿವಮೊಗ್ಗದ ಈದ್ ಮಿಲಾದ್ ಮೆರವಣಿಗೆಯಲ್ಲಿ ಯುವಕರ ಗುಂಪು ಪುಂಡಾಟ ಮೆರೆದಿತ್ತು. ಈ ಘಟನೆ ನಡೆಯುತ್ತಿದ್ದಂತೆ ಸರ್ಕಾರ ಎಲ್ಲಾ ಜಿಲ್ಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ಪ್ರಚೋದನಾತ್ಮಕ ಭಾವನೆಗಳಿಗೆ ಧಕ್ಕೆ ತರುವ ಬ್ಯಾನರ್, ಬಂಟಿಂಗ್ಸ್ ಕಟೌಟ್ ಗಳನ್ನು ತೆರವು ಮಾಡಲು ಸೂಚಿಸಿದೆ. ಈ ಸೂಚನೆಯ ಮೊದಲ ಪರಿಣಾಮ ಕರಾವಳಿ ಜಿಲ್ಲೆ ಉಡುಪಿ ಮೇಲೆ ಬಿದ್ದಿದೆ. ಅಕ್ಟೋಬರ್ 10 ರಂದು ಎಂಜಿಎಂ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ನಿಗದಿಯಾಗಿದೆ. ಕಾರ್ಯಕ್ರಮಕ್ಕೆ ನಗರ ಸಿದ್ಧಗೊಳ್ಳುತ್ತಿದೆ. ಸರಕಾರದ ಸೂಚನೆಯಂತೆ ಎಸ್ ಪಿ ಎಲ್ಲಾ ಅನಧಿಕೃತ ನಿಯಮಬಾಹಿರ ಕಟೌಟ್ ಗಳನ್ನು ತೆರವು ಮಾಡಲು ಸೂಚಿಸಿದ್ದಾರೆ.

ಎಸ್ ಪಿ ಡಾ. ಅರುಣ್ ಮಾತನಾಡಿ, ಅನಧಿಕೃತ ಬ್ಯಾನರ್ ಕಟೌಟ್ ಬಂಟಿಂಗ್ಸ್ ಗಳನ್ನು ತೆರವು ಮಾಡಲು ಸೂಚಿಸಲಾಗಿದೆ. ನಿಯಮ ಪ್ರಕಾರ ಪರವಾನಿಗೆ ಪಡೆದ ಕಟೌಟ್‌ಗಳಿಗೆ ನಾವು ಯಾವುದೇ ತೊಂದರೆ ಕೊಟ್ಟಿಲ್ಲ ಎಂದರು. ವಿಶ್ವ ಹಿಂದು ಪರಿಷತ್ ಬಜರಂಗದಳ, ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ಉಡುಪಿ ನಗರದಲ್ಲಿ 30ಕ್ಕೂ ಹೆಚ್ಚು ಕಟೌಟ್‌ಗಳನ್ನು ಅಳವಡಿಸಿದ್ದರು. ಯಾವುದೇ ಮುನ್ಸೂಚನೆ ನೀಡದೇ ಉಡುಪಿ ನಗರಸಭೆ ಕಟೌಟ್‌ಗಳನ್ನು ತೆರವು ಮಾಡಿದ್ದು ಆಯೋಜಕರ ಅಸಮಾಧಾನಕ್ಕೆ ಕಾರಣವಾಗಿದೆ. ವಿಶ್ವ ಹಿಂದೂ ಪರಿಷತ್ , ಬಜರಂಗದಳ ಮುಖಂಡರು ಉಡುಪಿ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಈ ಬಗ್ಗೆ ಎಸ್‌ಪಿ ಜೊತೆ ಮಾತುಕತೆ ಮಾಡಿದ್ದಾರೆ. ನಿಯಮದ ಹೆಸರಿನಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆಸಿರುವ ಹುನ್ನಾರ ಇದು. ಇಬ್ಬಗೆ ನೀತಿಯನ್ನು ಸರ್ಕಾರ ಪ್ರದರ್ಶಿಸುತ್ತಿದೆ ಎಂದು ಯಶ್‌ಪಾಲ್ ಆರೋಪಿಸಿದ್ದಾರೆ.

ಬ್ಯಾನರ್ ಕಟೌಟ್ ಅಳವಡಿಸುವ ನಿಗದಿತ ಸ್ಥಳದಲ್ಲಿ ಮಾತ್ರ ಅವಕಾಶ ಇದೆ. ನಿಯಮ ಬಾಹಿರವಾಗಿ ಅಳವಡಿಸಿದ್ದ ಎಲ್ಲಾ ಕಟೌಟ್‌ಗಳನ್ನು ನಾವು ತೆರವು ಮಾಡಿದ್ದೇವೆ. ಕಾರ್ಯಕ್ರಮ ನಡೆಯುವ ಮುಂಚಿತವಾಗಿ ಆ ಸ್ಥಳದಲ್ಲಿ ಕಟೌಟ್ ಹಾಕಲು ಅನುಮತಿ ಕೊಡುತ್ತೇವೆ ಎಂದರು.

You cannot copy content from Baravanige News

Scroll to Top