ಬೆಂಗಳೂರು, ಅ 05: ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಹಿಂಭಾಗದಲ್ಲಿರುವ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ನೂತನ ಬಸ್ ನಿಲ್ದಾಣ ಒಂದೇ ವಾರದಲ್ಲಿ ಮಂಗಮಾಯವಾಗಿದೆ.
10 ಲಕ್ಷ ರೂಪಾಯಿ ವೆಚ್ಚದಲ್ಲಿ ಬಿಬಿಎಂಪಿ ವತಿಯಿಂದ ಖಾಸಗಿ ಸಂಸ್ಥೆಯೊಂದು ನಿರ್ಮಿಸಲಾಗಿದ್ದ ಈ ಬಸ್ ನಿಲ್ದಾಣವು ಸ್ಟೀಲ್‌ನಿಂದ ಮಾಡಲ್ಪಟ್ಟಿತ್ತು. ಒಂದು ತಿಂಗಳ ಹಿಂದೆ ನಿರ್ಮಾಣ ಕಾರ್ಯ ಪೂರ್ಣಗೊಂಡ ಈ ಬಸ್ ನಿಲ್ದಾಣವು ಒಂದೇ ವಾರದಲ್ಲಿ ಕಳೆದುಹೋಗಿದೆ.
ಬಸ್ ನಿಲ್ದಾಣವನ್ನು ನಿರ್ಮಿಸಿದ ಖಾಸಗಿ ಕಂಪನಿಯ ಸಹಾಯಕ ಉಪಾಧ್ಯಕ್ಷ ಎನ್ ರವಿ ರೆಡ್ಡಿ ಅವರು ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದಾಗ ಬಸ್ ನಿಲ್ದಾಣ ಸ್ಥಳದಲ್ಲಿ ಇಲ್ಲದಿರುವುದನ್ನು ಕಂಡು ಅಚ್ಚರಿಗೊಳಗಾಗಿದ್ದಾರೆ. ಹೀಗಾಗಿ ಬಿಬಿಎಂಪಿ ಬಳಿ ವಿಚಾರಿಸಿದಾಗ ಅವರು ತೆರವು ಮಾಡಿಲ್ಲ ಎಂದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಲು ಬಸ್ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.