ಕ್ರೀಡಾ ಸಾಧನೆ ಪಟ್ಟಿಗೆ ಕಾರ್ಕಳದ ಆಯುಷ್‌ ಶೆಟ್ಟಿ ಸೇರ್ಪಡೆ

ಕಾರ್ಕಳ: ಅಮೆರಿಕದ ನ್ಪೋಕೆನ್‌ನಲ್ಲಿ ರವಿವಾರ ನಡೆದ ಬಿಡಬ್ಲ್ಯೂ ಎಫ್‌ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಬಾಲಕರ ಸಿಂಗಲ್ಸ್‌ ನಲ್ಲಿ ಭಾರತ ತಂಡದ ಆಟಗಾರ ಕಾರ್ಕಳ ಮೂಲದ ಆಯುಷ್‌ ಶೆಟ್ಟಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಶನಿವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ನ ಯುಡೈ ಒಕಿ ಮೊಟೋ ಅವರನ್ನು 21-16, 21-17ರಿಂದ ಮಣಿಸಿ ಮುನ್ನಡೆ ಸಾಧಿಸಿದ್ದರು. ರವಿವಾರ ನಡೆದ ನಾಲ್ವರ ಘಟ್ಟದ ಸೆಮಿಫೈನಲ್‌ನಲ್ಲಿ ಇಂಡೋನೇಶ್ಯಾದ ಆಲ್ವಿ ಫಹಾನ್‌ ಅವರಿಗೆ ಮೊದಲ ಸುತ್ತಿನಲ್ಲಿ ಪ್ರಬಲ ಪೈಪೋಟಿ ನೀಡಿದರಾದರೂ ಅಂತಿಮವಾಗಿ 21-18, 21-14ರಿಂದ ಸೋಲು ಅನುಭವಿಸಿದರು. ಈ ಮೂಲಕ ಅವರು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಮಹಿಳೆಯರ ಸಿಂಗಲ್ಸ್‌ ನಲ್ಲಿ ತಾರಾ ಶಾ ಚೀನಾದ ಕ್ಸು ವೆನ್‌ ಜಿ ಜಿಂಗ್‌ ವಿರುದ್ಧ ಸೋಲು ಕಂಡು ಸೆಮಿಫೈನಲ್‌ಗೆ ಏರುವ ಮೊದಲೇ ಟೂರ್ನಮೆಂಟ್‌ ನಿಂದ ಹೊರಬಿದ್ದರು. ಭಾರತದಿಂದ ತೆರಳಿದ 16 ಮಂದಿ ಕ್ರೀಡಾಪಟುಗಳ ಪೈಕಿ ಆಯುಷ್‌ ಮಾತ್ರವೇ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಳ್ಳಿ ಹುಡುಗನ ಸಾಧನೆ


ಆಯುಷ್‌ ಅವರು ಕಾರ್ಕಳ ಸಾಣೂರಿನ ಕೃಷಿಕ ಪೋಷಕ ರಾಮ್‌ಪ್ರಕಾಶ್‌, ಶಾಲ್ಮಲಿ ದಂಪತಿಯ ಪುತ್ರ. ಹಳ್ಳಿಯ ಮನೆಯಂಗಳದಲ್ಲಿ ಹವ್ಯಾಸಿಯಾಗಿ ಆಟವಾಡುತ್ತ ಬ್ಯಾಡ್ಮಿಂಟನ್‌ನಲ್ಲಿ ತೊಡಗಿಸಿಕೊಂಡು ಬೆಳೆದ ಬಾಲಕ ಇಂದು ಬಿಡಬ್ಲ್ಯೂ ಎಫ್‌ ಜೂನಿಯರ್‌ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದಲ್ಲದೆ ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗಳಿಸಿ ಸಾಧನೆ ತೋರಿದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರು 3ನೇ ತರಗತಿಯಿಂದ ತರಬೇತಿ ಪಡೆದಿದ್ದರು.

ಅಮೆರಿಕ ಬಿಡಬ್ಲ್ಯೂ ಎಫ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಸ್ಪರ್ಧೆಗೆ ಪೂರ್ವಭಾವಿಯಾಗಿ ಜುಲೈಯಲ್ಲಿ ಆಯ್ಕೆ ಟ್ರಯಲ್ಸ್‌ ನಡೆದಿತ್ತು. ಎರಡು ಬಾರಿ ಅಂಡರ್‌ – 19 ವಯೋಮಿತಿಯಲ್ಲಿ ಚಾಂಪಿಯನ್‌ ಆಗಿದ್ದ ಆಯುಷ್‌ ಟ್ರಯಲ್ಸ್‌ನಲ್ಲಿ ಅಗ್ರಸ್ಥಾನ ಪಡೆದು ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದರು.

ಬಿಡಬ್ಲ್ಯೂ ಎಫ್‌ ಟೂರ್ನ್ಮೆಂಟ್‌ ನಾಯಕನಾಗಿ ಆಯ್ಕೆಯಾದ ಸಂದರ್ಭ ಉದಯವಾಣಿ ಜತೆ ಮಾತನಾಡಿದ್ದ ಆಯುಷ್‌ ಮಹತ್ತರ ಸಾಧನೆಯ ವಿಶ್ವಾಸ ವ್ಯಕ್ತಪಡಿಸಿದ್ದರು.

ಚಿನ್ನ, ಬೆಳ್ಳಿ ಪದಕ ಗಳಿಸಲಾಗದಿದ್ದರೂ ಕಂಚು ಪಡೆಯುವ ಮೂಲಕ ದೇಶದ ಮಾನ ಉಳಿಸಿದ್ದಾರೆ. ಮುಂದೆ ಅವಕಾಶವಿದ್ದು ಇನ್ನಷ್ಟು ಸಾಧನೆಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾರ್ಕಳದ ಸಾಧಕರ ಪಟ್ಟಿಗೆ ಸೇರ್ಪಡೆ

ಕಾರ್ಕಳ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಮತಾ ಪೂಜಾರಿ, ಅಕ್ಷತಾ ಬೋಳ, ಅಕ್ಷತಾ ಕೆರ್ವಾಶೆ ಸಹಿತ ಅನೇಕ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಸಾಧನೆ ತೋರಿದ ಕ್ರೀಡಾಪಟುಗಳಿದ್ದು ಇದೀಗ ಮತ್ತೋರ್ವ ಪ್ರತಿಭೆ 18ರ ವಯಸ್ಸಿನ ಆಯುಷ್‌ ಆಯುಷ್‌ ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ತೋರಿದ್ದಾರೆ.

Scroll to Top