ಬನ್ಸ್ ರಾಘು ಮರ್ಡರ್ ಕೇಸ್ : ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಕುಂದಾಪುರ : ಸ್ಥಳೀಯ ಖಾರ್ವಿಕೇರಿ ನಿವಾಸಿ ರಾಘವೇಂದ್ರ ಶೇರುಗಾರ್ (ಬನ್ಸ್ ರಾಘು) (42) ಕೊಲೆ ಪ್ರರಕಣದ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.


ಶಿವಮೊಗ್ಗ ನಿವಾಸಿಗಳಾದ ಶಫಿವುಲ್ಲಾ ಅಲಿಯಾಸ್ ಆಟೋ ಶಫಿ (40), ಮಹಮ್ಮದ್ ಇಮ್ರಾನ್ (43) ಅಕ್ಟೋಬರ್ 5 ರಂದು ಕುಂದಾಪುರ ಪೊಲೀಸರು ಶಿವಮೊಗ್ಗ ರೈಲ್ವೇ ನಿಲ್ದಾಣದ ಬಳಿ ಬಂಧಿಸಿದ್ದು ಅಕ್ಟೋಬರ್ 6 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಹೆಚ್ಚಿನ ತನಿಖೆಗೆ ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದಿದ್ದು, ಸೋಮವಾರ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ರಾಘವೇಂದ್ರ ಶೇರುಗಾರ್ ಚಿಕನ್ ಸಾಲ್ ರಸ್ತೆಯಲ್ಲಿ ತಮ್ಮ ಕಾರಿನಲ್ಲಿ ಸಾಗುತ್ತಿದ್ದ ವೇಳೆ ಓವರ್ ಟೇಕ್ ಮಾಡುವ ಭರದಲ್ಲಿ ಆರೋಪಿಗಳ ಕಾರಿಗೆ ತಾಗಿತ್ತು. ಇದೇ ವಿಚಾರದಲ್ಲಿ ನಡೆದ ಗಲಾಟೆ ತಾರಕಕ್ಕೇರಿ ಆರೋಪಿತ ಶಫಿವುಲ್ಲಾ ತನ್ನ ಕಾರಿನೊಳಗಿದ್ದ ಚಾಕುವಿನಿಂದ ರಾಘವೇಂದ್ರ ಶೇರುಗಾರ್‌ ಇರಿದು ಪರಾರಿಯಾಗಿದ್ದ.ವಿಪರೀತ ರಕ್ತಸ್ರಾವಗೊಂಡು ರಾಘವೇಂದ್ರ ಶೇರುಗಾರ್‌ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.


ರಾಘವೇಂದ್ರ ಶೇರುಗಾರ್‌ ನಡುವೆ ಬೇರೆ ಯಾವುದೇ ವೈಷಮ್ಯ, ಪೂರ್ವದ್ವೇಷ, ವ್ಯವಹಾರ ಮತ್ತು ಯಾವುದೇ ಸಂಘರ್ಷ ಇಲ್ಲದಿರುವುದು ತನಿಖೆಯಿಂದ ಕಂಡುಬಂದಿದೆ. ಆರೋಪಿ ಶಾಫಿವುಲ್ಲಾಗೆ ಜುಗಾರಿ ಆಡುವ ಚಟವಿದ್ದು ಆತನ ಸ್ನೇಹಿತ ಇಮ್ರಾನ್‌ನನ್ನು ಜೊತೆಯಲ್ಲಿ ಕರೆದುಕೊಂಡು ಕಾರಿನಲ್ಲಿ ಬೇರೆ ಕಡೆಗಳಿಗೆ ಜುಗಾರಿ ಆಡುತ್ತಿದ್ದ. ಅಕ್ಟೋಬರ್ 1ರಂದು ಕುಂದಾಪುರದಿಂದ ಮರಳಿ ಶಿವಮೊಗ್ಗಕ್ಕೆ ಹೋಗುವಾಗ ಈ ಘಟನೆ ಸಂಭವಿಸಿದೆ.ಶಫೀವುಲ್ಲಾ ಬಳಿ ಶಿವಮೊಗ್ಗದಲ್ಲಿ ನಾಲ್ಕು ಆಟೋಗಳಿದ್ದು ಇಮ್ರಾನ್ ಅದರಲ್ಲಿ ಒಂದು ಆಟೋದ ಚಾಲಕನಾಗಿದ್ದಾನೆ.


ಉಡುಪಿ ಎಸ್ಪಿ ಡಾ. ಅರುಣ್ ಕೆ. ಹೆಚ್ಚುವರಿ ಎಸ್ಪಿ ಕೆ.ಟಿ ಸಿದ್ಧಲಿಂಗಪ್ಪ ಕುಂದಾಪುರ ಡಿವೈಎಸ್ಪಿ ಕೆ.ಯು. ಮಾರ್ಗದರ್ಶನದಲ್ಲಿ ಮೂರು ವಿಶೇಷ ತನಿಖಾ ತಂಡ ರಚಿಸಿದ್ದರು. ಪೊಲೀಸರ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಸಿಸಿ ಟಿವಿ ದೃಶ್ಯಾವಳಿ ಸಹಿತ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದು ಕಲೆಹಾಕಿ ಮಾಹಿತಿ ಆರೋಪಿಗಳ ಪತ್ತೆಗೆ ಶಿವಮೊಗ್ಗ, ಬೆಂಗಳೂರು ಸಹಿತ ವಿವಿಧ ಕಡೆಗಳಿಗೆ ತೆರಳಿದ್ದರು. ಕುಂದಾಪುರ ಪೊಲೀಸ್ ನಿರೀಕಕ ನಂದಕುಮಾರ್‌ನೇತೃತ್ವದಲ್ಲಿ ಕುಂದಾಪುರ ಠಾಣೆಯ ಪಿಎಸ್‌ಐ ವಿನಯ ಕೊರ್ಲಹಳ್ಳಿ, ಅಪರಾಧ ವಿಭಾಗದ ಪಿಎಸ್‌ಐ ಪ್ರಸಾದ್‌ ಕುಮಾರ್‌, ಶಂಕರನಾರಾಯಣ ಠಾಣೆಯ ಪಿಎಸ್‌ಐ ಮಧು. ಬಿ.ಇ ಹಾಗೂ ಸಿಬ್ಬಂದಿಗಳಾದ ಮಧು ಸೂದನ್‌, ರಾಮ, ಶ್ರೀಧರ್, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ ಆರೋಪಿಗಳನ್ನು ಬಂಧಿಸಿದ್ದರು.

You cannot copy content from Baravanige News

Scroll to Top