ಕಾಕಿನಾಡ (ಆಂಧ್ರಪ್ರದೇಶ), ಸೆ 26: ತನ್ನ ಮತ್ತು ಪತ್ನಿಯ ಬಣ್ಣ ಬಿಳಿಯಾಗಿದ್ದರೂ, ಮಗು ಕಪ್ಪು ಬಣ್ಣವಿದೆ ಎಂಬ ಕಾರಣಕ್ಕೆ ಪತ್ನಿಯ ಶೀಲ ಶಂಕಿಸಿ ಪತಿ ಆಕೆಯನ್ನು ಕೊಲೆಗೈದ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.
ಕರಂಗಾವ್ ಗ್ರಾಮದ ಲಿಪಿಕಾ ಮಂಡಲ್ ಮೃತಪಟ್ಟಾಕೆ. ಒಡಿಶಾದ ಉಮ್ಮರ್‌ಕೋಟ್ ಸಿಲಾಟಿಗಾಂವ್ ಗ್ರಾಮದ ಮಾಣಿಕ್ ಘೋಷ್ ಎಂಬಾತ ಕೃತ್ಯ ಎಸೆಗಿದ ಪಾಪಿ ಪತಿ. ಮೊದಲು ಪೊಲೀಸರು ಇದೊಂದು ಸಹಜ ಸಾವು ಎಂದು ಪರಿಗಣಿಸಿದರು. ಬಳಿಕ ಇದೊಂದು ಕೊಲೆ ಎಂಬುದು ಎರಡೂವರೆ ವರ್ಷದ ಕಂದಮ್ಮನ ಮುಖಾಂತರ ಗೊತ್ತಾಗಿದೆ.
ಏಳು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ಉದ್ಯೋಗದ ಸಲುವಾಗಿ ಆಂಧ್ರಪ್ರದೇಶದ ಕಾಕಿನಾಡಕ್ಕೆ ಬಂದಿದ್ದರು. ಇವರಿಗೆ ಎರಡೂವರೆ ವರ್ಷದ ಹೆಣ್ಣು ಮಗುವಿದೆ. ಆದರೆ ಮಗುವಿನ ಬಣ್ಣ ಕಪ್ಪಗಿದ್ದು, ದಂಪತಿ ಬಿಳಿ ಇದ್ದರು. ಇದರಿಂದ ಪತಿಗೆ ಪತ್ನಿ ಮೇಲೆ ಸಂದೇಹ ಹೆಚ್ಚಿತ್ತು. ಅಲ್ಲದೆ ಇದೇ ವಿಚಾರವಾಗಿ ಹಲವು ಬಾರಿ ಇಬ್ಬರು ಜಗಳ ಮಾಡಿಕೊಂಡಿದ್ದರು. ಬಳಿಕ ಆತನ ದೌರ್ಜನ್ಯಕ್ಕೆ ಬೇಸತ್ತು ಲಿಪಿಕಾ ತವರಿಗೆ ತೆರಳಿದ್ದರು. ಕುಟುಂಬಿಕರು ಸೇರಿ ರಾಜಿ ಸಂಧಾನ ನಡೆಸಿದ ಬಳಿಕ ಮತ್ತೆ ಪತಿಯೊಂದಿಗೆ ವಾಸವಾಗಲು ಲಿಪಿಕಾ ಬಂದಿದ್ದರು.
ಆದರೆ ಸೆಪ್ಟಂಬರ್ 18ರಂದು ಆಕೆ ಮೂರ್ಛೆ ತಪ್ಪಿ ಬಿದ್ದಿರುವುದಾಗಿ ಹೇಳಿದ ಪತಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು. ಅಮ್ಮ ಸಾವನ್ನಪ್ಪಿದ ಬಳಿಕ ಎರಡೂವರೆ ವರ್ಷದ ಕಂದಮ್ಮ ಅಜ್ಜಿ ಮನೆಗೆ ಬಂದಿದ್ದು, ಅಮ್ಮನ ಕುತ್ತಿಗೆಯನ್ನು ಎರಡೂ ಕೈಗಳಿಂದ ತಂದೆ ಗಟ್ಟಿಯಾಗಿ ಹಿಡಿದುಕೊಂಡದ್ದು, ತಾಯಿ ಒದ್ದಾಡಿರುವುದು, ಬಳಿಕ ಅಮ್ಮ ಬಿದ್ದು, ಮಾತನಾಡದೇ ಇದ್ದುದ್ದನ್ನೆಲ್ಲಾ ಹೇಳಿದೆ. ಪುತ್ರಿ ಪ್ರಜ್ಞೆ ತಪ್ಪಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದೇ ಭಾವಿಸಿದ್ದ ಲಿಪಿಕಾ ಪೋಷಕರಿಗೆ ಮಗುವಿನ ಮಾತು ಕೇಳಿದ ಬಳಿಕ ಕೊಲೆ ಎಂಬುದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರೆದುರು ಕೂಡಾ ಮಗು ನಡೆದ ಘಟನೆಯನ್ನು ಹೇಳಿದೆ. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.