ತುಳುಕೂಟಕ್ಕೆ 50 ವರ್ಷದ ಸಂಭ್ರಮ: ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಕಂಪು, ನೆರವೇರಿದ ಪೂಜೆ

ಬೆಂಗಳೂರು : ಕರಾವಳಿ ಜನರ ಸಾಂಸ್ಕೃತಿಕ ಆಚರಣೆ ಕಂಬಳಕ್ಕೆ ಬೆಂಗಳೂರಿನಲ್ಲಿ ತಯಾರಿ ಶುರುವಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿದ್ದು, ಇಂದು ಅರಮನೆ ಮೈದಾನದಲ್ಲಿ ಕಂಬಳದ ಕರೆ ಪೂಜೆ (ಭೂಮಿ ಪೂಜೆ) ನೆರವೇರಿದೆ.



ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಂಬಳದ ಕರೆ ಪೂಜೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಡಿವಿ ಸದಾನಂದ ಗೌಡ, ಮಾಜಿ ಡಿಸಿಎಂ ಡಾ. ಸಿಎನ್ ಅಶ್ವತ್ ನಾರಾಯಣ್, ಶಾಸಕ ಹ್ಯಾರೀಸ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ತುಳುಕೂಟಕ್ಕೆ 50 ವರ್ಷದ ಸಂಭ್ರಮ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಕಂಬಳ ಆಯೋಜನೆ ಮಾಡಲಾಗುತ್ತಿದ್ದು, ನವೆಂಬರ್ ತಿಂಗಳ 24, 25, 26ರಂದು ಕಂಬಳ ನನಡೆಯಲಿದೆ.

ಇಂದಿನಿಂದ ಒಂದು ತಿಂಗಳ ಕಾಲ ಕಂಬಳಕ್ಕಾಗಿ ಟ್ರ್ಯಾಕ್ ಸಿದ್ದಪಡಿಸಲಾಗುತ್ತೆ.

ಬೆಂಗಳೂರಿನ ಕಂಬಳದ ವಿಶೇಷತೆಗಳೇನು.!??

ಕಂಬಳ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಆಚರಣೆ. ಪ್ರತಿಷ್ಠೆಗಾಗಿ ನಡೆಯುವ ಈ ಕಂಬಳ ಕರಾವಳಿ ಭಾಗದಲ್ಲಿ ಅತ್ಯಂತ ವಿಶೇಷ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕೇರಳ ರಾಜ್ಯದ ಕಾಸರಗೋಡು ಭಾಗದಲ್ಲಿ ಕಂಬಳ ಕಾಮನ್. ವರ್ಷದಲ್ಲಿ ಕಂಬಳ ಋತುವಿನಲ್ಲಿ ಕರಾವಳಿಯಲ್ಲಿ ಸಾಲು ಸಾಲು ಕಂಬಳಗಳು ನಡೆಯುತ್ತವೆ. ಆದರೆ ಈ ವರ್ಷ ಇದೆಲ್ಲದಕ್ಕೂ ಮೊದಲು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ.

ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ. ನವೆಂಬರ್ 24 ರಿಂದ ಮೂರು ದಿನಗಳ ಕಾಲ ಅದ್ದೂರಿ ಕಂಬಳ ನಡೆಯಲಿದೆ. 125 ರಿಂದ 150 ಜೊತೆ ಕೋಣಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ ಕಂಬಳ ಮಾಡಲಾಗುತ್ತದೆ.

ಬೆಂಗಳೂರಿನ ಕಂಬಳ ಕಾರ್ಯಕ್ರಮಕ್ಕೆ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಕರೆಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ಕರಾವಳಿ ಮೂಲದವರಾದ ಅನುಷ್ಕಾ ಶೆಟ್ಟಿ ಆಗಮನ ಖಚಿತವಾಗಿದೆ. ಕಾಂತಾರ ಹಾಗೂ ಕಾಂತಾರ 2 ಚಿತ್ರತಂಡ ಕೂಡ ಬರಲಿದೆ. ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ.

ನವೆಂಬರ್ 23ರಂದು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಿಂದ ಲಾರಿ ಮೂಲಕ ಕೋಣಗಳು ಬೆಂಗಳೂರಿನ ಕಡೆ ಹೊರಡಲಿವೆ. ಅದರ ಜೊತೆ ಪಶು ವೈದ್ಯರು ಮತ್ತು ಆಂಬ್ಯುಲೆನ್ಸ್ ಕೂಡ ಬರಲಿದೆ. ಇಲ್ಲಿಂದ ಬೀಳ್ಕೊಡುಗೆ ಸಮಾರಂಭ ಮತ್ತು ಹಾಸನ ಸೇರಿದಂತೆ ವಿವಿಧ ಕಡೆ ವಿರಾಮದ ವ್ಯವಸ್ಥೆ ಮಾಡಲಾಗಿದೆ. ಇನ್ನು ಕೋಣದ ಮಾಲೀಕರ ಬೇಡಿಕೆಯಂತೆ ಬೆಂಗಳೂರಿನಲ್ಲಿ ಕೋಣಗಳಿಗೆ ಕುಡಿಯುವ ನೀರನ್ನು ಕರಾವಳಿಯಿಂದಲೇ ಟ್ಯಾಂಕರ್ ಮೂಲಕ ತೆಗೆದುಕೊಂಡು ಹೋಗಲು ನಿರ್ಧಾರ ಮಾಡಲಾಗಿದೆ.

ಈ ಕಂಬಳಕ್ಕೆ ಎಂಟು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕಂಬಳ ಪ್ರತಿಷ್ಠೆಗೆ ಕೂಡ ನಡೆಯುವ ಕ್ರೀಡೆ. ಆದ್ದರಿಂದ ಕೋಣಗಳ ಮಾಲೀಕರಿಗೆ ಬಾರಿ ಗೌರವವಿರುತ್ತದೆ. ತಮ್ಮ ಹೆಸರಿನಲ್ಲಿ ಕೋಣಗಳನ್ನು ಓಡಿಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಭಾಧ್ಯಕ್ಷ ಯು.ಟಿ ಖಾದರ್, ಸಚಿವ ಸುಧಾಕರ್ ಸೇರಿದಂತೆ ಸಾಕಷ್ಟು ಸಚಿವರು ಬೇಡಿಕೆ ಇಟ್ಟಿದ್ದಾರಂತೆ. ಆದರೆ ಕೋಣಗಳನ್ನು ಕೊಡಲು ಮಾಲೀಕರು ಮಾತ್ರ ಈವರೆಗೂ ಒಪ್ಪಿಲ್ಲ.

Scroll to Top