ಉಡುಪಿ : ಗ್ರಾ.ಪಂ. ಅನುಮತಿಸಿದ ಮರಳು ತಾಲೂಕಿನ ಒಳಗೆ ಬಳಸಬಹುದು – ಡಾ. ವಿದ್ಯಾಕುಮಾರಿ

ತೆಕ್ಕಟ್ಟೆ : ಗ್ರಾಮ ಪಂಚಾಯತ್‌ ಗುರುತಿಸಿ ನೀಡುವ ಮರಳು ಪರವಾನಿಗೆ ಯನ್ನು ಆಯಾ ತಾಲೂಕಿನ ಒಳಗಿನ ಜನರು ಬಳಕೆ ಮಾಡಬಹುದಾಗಿದೆ. ಆದರೇ ತಾಲೂಕಿನ ಹೊರಗಡೆ ನೀಡಲು ಅವಕಾಶಗಳಿಲ್ಲ; ಒಂದು ವೇಳೆ ತಾಲೂಕಿನ ಗಡಿದಾಟಿ ಸಾಗಾಟವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.
ವಿದ್ಯಾ ಕುಮಾರಿ ಹೇಳಿದರು.

ಗುರುವಾರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ಅವರು ಈ ಬಗ್ಗೆ ಮಾತನಾಡಿದರು.

ಜನರಿಗೆ ಮರಳಿನ ಆವಶ್ಯಕತೆ ಇರುವುದರಿಂದ ತೀರಾ ನಿರ್ಬಂಧ ಹೇರಲು ಆಗುವುದಿಲ್ಲ, ಜತೆಗೆ ಮರಳು ದಿಬ್ಬಗಳ ಸೃಷ್ಟಿಯಿಂದ ನೀರಿನ ಒಳ ಹರಿವಿಗೂ ಸಮಸ್ಯೆಯಾಗುತ್ತದೆ. ಆದ್ದರಿಂದ ಆಯಾ ತಾಲೂಕಿನ ಮರಳನ್ನು ಅದೇ ತಾಲೂಕಿನಲ್ಲಿ ಬಳಸಲು ಅವಕಾಶ ಇದೆ. ಆದರೆ ಅಕ್ರಮ ಮರಳುಗಾರಿಕೆ ಮಾಡಲು ಬಿಡುವುದಿಲ್ಲ. ಈ ಬಗ್ಗೆ ಪೊಲೀಸರು ಕಣ್ಣಿಡಲಿದ್ದಾರೆ ಎಂದರು.

ಇತ್ತೀಚೆಗೆ ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್‌ನ ಗ್ರಾಮಸಭೆಯಲ್ಲಿ ಗ್ರಾ.ಪಂ.ನಿಂದ ನೀಡುತ್ತಿರುವ ಹೊಗೆ ಪರವಾನಿಗೆ ಬಗ್ಗೆ ತಕರಾರು ಬಂದಿದ್ದು, ಗ್ರಾಮಸ್ಥರು ಆಕ್ಷೇಪಣೆ ಸಲ್ಲಿಸಿದ್ದರು. ಪ್ರಸ್ತುತ ಪರವಾನಿಗೆ ಮೂಲಕ ಸಾಗುವ ಹೊಗೆ ಸ್ಥಗಿತಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಚರ್ಚಿಸಲಾಗಿದ್ದು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಲ್ಲಿ ಪರಿಶೀಲಿಸುವಂತೆ ತಿಳಿಸಿದ್ದೇನೆ. ಆದರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಿರೇಹೊಳೆ ಸೇತುವೆಯ ಸಮೀಪ ಮರಳುಗಾರಿಕೆಗೆ ಅವಕಾಶಗಳಿಲ್ಲ ಎಂದರು..

Scroll to Top