ಉಡುಪಿ, ಅ.13: ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾಗಿರುವ ಥೀಂ ಪಾರ್ಕ್‌ನಲ್ಲಿ ತಲೆ ಎತ್ತಿದ್ದ ಪರಶುರಾಮನ ಪ್ರತಿಮೆ ರಾತ್ರೋರಾತ್ರಿ ಮಾಯವಾಗಿದೆ.
ಹೌದು. ಬೆಟ್ಟದ ಮೇಲಿನಿಂದ ಪರಶುರಾಮನ ಪ್ರತಿಮೆ ಕಣ್ಮರೆಯಾಗಿದೆ. ಕಾರ್ಕಳ ಕಾಂಗ್ರೆಸ್ ಪರಶುರಾಮನ ವಿಗ್ರಹ ನಕಲಿ ಎಂದಿದ್ದು, ಈ ಬಗ್ಗೆ ಮಾಜಿ ಸಚಿವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸ್ಪಷ್ಟನೆ ಕೊಡಬೇಕೆಂದು ಆಗ್ರಹಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಥೀಂ ಪಾರ್ಕ್ ಲೋಕಾರ್ಪಣೆ ಮಾಡಿದ್ದರು. ವಿಧಾನ ಸಭಾ ಚುನಾವಣೆಗೆ ತಿಂಗಳು ಬಾಕಿ ಇರುವಾಗ ಥೀಂ ಪಾರ್ಕ್ ಉದ್ಘಾಟನೆ ಶಾಸಕರಿಗೆ ಭಾರೀ ಯಶಸ್ಸು ತಂದುಕೊಟ್ಟಿತ್ತು.
ಉದ್ಘಾಟನೆಯಾದ ಬಳಿಕ ಸಿಡಿಲು ನಿರೋಧಕ ಅಳವಡಿಕೆ ಮತ್ತು ಇನ್ನಿತರ ಬಾಕಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಥೀಂ ಪಾರ್ಕ್ ಬಂದ್ ಮಾಡಿರುವ ವಿಚಾರವಾಗಿ, ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಪರಶುರಾಮನ ಮೂರ್ತಿ ನಕಲಿ ಎನ್ನುವ ಮೂಲಕ ಹೊಸ ವಿವಾದ ಆರಂಭವಾಗಿತ್ತು. ಇದೀಗ ಕಳೆದ ರಾತ್ರಿ ಬೆಟ್ಟದ ಮೇಲಿನ ಮೂರ್ತಿ ಮಾಯವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ಸ್ಪಷ್ಟವಾದ ಮಾಹಿತಿ ನೀಡದ ಹಿನ್ನಲೆಯಲ್ಲಿ ವಿಚಾರಣೆಗೆ ಆದೇಶ ನೀಡಿದ್ದರು. ಸದ್ಯ ಕೆಲವು ದಿನಗಳಿಂದ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ಅನುಮಾನ ಇನ್ನಷ್ಟು ಹೆಚ್ಚಾಗಿತ್ತು. ಮೂರ್ತಿಯನ್ನು ಪೂರ್ತಿಯಾಗಿ ತೆರವು ಮಾಡಿದ್ದು, ಅನುಮಾನಕ್ಕೆ ಕಾರಣವಾಗಿದೆ.
ಇದೇ ವಿಚಾರವಾಗಿ ಕಾರ್ಕಳ ಕಾಂಗ್ರೆಸ್ ಸೋಮವಾರ ಪ್ರತಿಭಟನೆ ನಡೆಸಲಿದೆ. ನವೆಂಬರ್ ತಿಂಗಳ ಅಂತ್ಯಕ್ಕೆ ಕಂಚಿನ ಮೂರ್ತಿ ತಯಾರಿ ಪೂರ್ಣವಾಗಲಿದೆ. ಈ ನಡುವೆ ಪರಶುರಾಮ ಮೂರ್ತಿ ವಿಚಾರವಾಗಿ ಶಾಸಕರು ಸ್ಪಷ್ಟನೆ ನೀಡುವಂತೆ ಒತ್ತಾಯ ಕೇಳಿಬಂದಿದೆ.