ಭತ್ತದ ಬೆಳೆಯಲ್ಲಿ ಮೂಡಿದ ಕರ್ನಾಟಕ ರತ್ನ ಅಪ್ಪು ಭಾವಚಿತ್ರ; ರೈತನ ಕಲೆಗೆ ಫ್ಯಾನ್ಸ್ ಫಿದಾ!

ರಾಯಚೂರು : ಕರ್ನಾಟಕ ರತ್ನ, ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ್ ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಅಭಿಮಾನ ಹಾಗೂ ಪ್ರೀತಿ. ನೆಚ್ಚಿನ ನಟನ ನೆನಪಿಗಾಗಿ ಸಾಕಷ್ಟು ಅಭಿಮಾನಿಗಳು ಭಿನ್ನ ವಿಭಿನ್ನ ರೀತಿಯಲ್ಲಿ ಅಪ್ಪು ಮೇಲಿನ ಪ್ರೀತಿಯನ್ನು ರಕ್ತದಾನದ ಮೂಲಕ ತೋರಿಸಿದ್ದಾರೆ. ಆದರೆ ರಾಯಚೂರಿನ ಅಭಿಮಾನಿಯೊಬ್ಬರು ಅವರ ಮೇಲಿನ ಪ್ರೀತಿಯನ್ನು ವಿಶೇಷವಾಗಿ ತೋರ್ಪಡಿಸಿದ್ದಾರೆ.



ಹೌದು, ಅಕ್ಟೋಬರ್ 29ಕ್ಕೆ ಪವರ್ ಸ್ಟಾರ್ ಪುನೀತ್ರಾಜ್ ಕುಮಾರ್ ಅವರ ಎರಡನೇ ವರ್ಷದ ಶ್ರದ್ಧಾಂಜಲಿ ಇದೆ. ಹೀಗಾಗಿ ವಿಶಿಷ್ಟ ಕಲೆಯ ಮೂಲಕ ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಅಭಿಮಾನಿಗಳು.

ಜಿಲ್ಲೆಯ ಶ್ರೀನಿವಾಸ್ ಕ್ಯಾಂಪ್ ನ ವಿಕಲಚೇತನ ರೈತ ಕರ್ರಿ ಸತ್ಯನಾರಾಯಣ ಎಂಬ ಅಪ್ಪು ಅವರ ಅಭಿಮಾನಿ 3 ತಳಿಯ ಭತ್ತದ ಬೀಜಗಳನ್ನ ಬಳಸಿ ವಿನೂತನ ಅಪ್ಪು ಭಾವಚಿತ್ರ ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.



ಆಂಧ್ರ ಮೂಲದ ಕರ್ರಿ ಸತ್ಯನಾರಾಯಣ ಅವರ ಆರು ಎಕರೆ ಗದ್ದೆಯಲ್ಲಿ, ಎರಡು ಎಕರೆ ಪ್ರದೇಶವನ್ನು ಅಪ್ಪುವಿನ ಭಾವಚಿತ್ರಕ್ಕಾಗಿಯೇ ಮೀಸಲು ಇಟ್ಟಿದ್ದಾರೆ. ಗುಜರಾತ್ ರಾಜ್ಯದ ಗೋಲ್ಡನ್ ರೋಸ್ ಹಾಗೂ ತೆಲಂಗಾಣದ ಕಾಲಾ ಪಟ್ಟಿ, ಮತ್ತು ಕರ್ನಾಟಕದ ಲೋಕಲ್ ತಳಿಯಾಗಿರುವ ಸೋನಾಮಸೂರಿ ಭತ್ತದ ಬೀಜಗಳನ್ನ ಬಳಸಿ ರೈತರೊಬ್ಬರು ಅಪ್ಪು ಭಾವಚಿತ್ರ ಅರಳುವಂತೆ ಮಾಡಿದ್ದಾರೆ. ಆ ಮೂಲಕ ಅಪ್ಪು ಅವರ ಎರಡನೇ ಶ್ರದ್ಧಾಂಜಲಿಗೆ ಅಭಿಮಾನಿಗಳಿಗೆ ವಿಶೇಷವಾಗಿ ನಮನ ಸಲ್ಲಿಸುತ್ತಿದ್ದಾರೆ.

ಇನ್ನೂ ಗುಜರಾತ್, ತೆಲಂಗಾಣ ಮತ್ತು ಕರ್ನಾಟಕ ಸೇರಿದಂತೆ 3 ತಳಿಯ ಸುಮಾರು 100 ಕೆಜಿ ಬೀಜಗಳನ್ನು ಚಾಕಚಕ್ಯತೆಯಿಂದ ಬಳಸಿ ಅಪ್ಪು ಭಾವಚಿತ್ರ ಒಡಮೂಡುವಂತೆ ಮಾಡಿದ್ದಾರೆ. ಭತ್ತದ ನಾಡು ಎಂದು ಕರೆಸಿಕೊಳ್ಳುವ ರಾಯಚೂರಿನಲ್ಲಿ ಭತ್ತದ ಗದ್ದೆಯಲ್ಲಿ ಅಪ್ಪು ಭಾವಚಿತ್ರ ಅರಳಿದೆ. ಕರ್ರಿ ಸತ್ಯನಾರಾಯಣ ಅವರು ಸ್ವತಃ ಅಪ್ಪು ಅವರ ಪ್ರೀತಿಯ ಧರ್ಮ ಪತ್ನಿ ಅಶ್ವಿನಿಯವರ ಕೈಯಾರೇ ಅಪ್ಪು ಭಾವಚಿತ್ರವನ್ನು ಲೋಕಾರ್ಪಣೆ ಮಾಡಿಸಿದ್ದಾರೆ.

ಈಗಾಗಲೇ ಸತ್ಯನಾರಾಯಣ ಅವರು ಅಶ್ವಿನಿ ‌ಪುನೀತ್ರಾಜ್ ಕುಮಾರ್ ಅವರನ್ನ ಭೇಟಿಯಾಗಿದ್ದಾರೆ. ಇನ್ನೂ ಈ ಕಾರ್ಯಕ್ಕೆ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ರಾಜ್ ಕುಮಾರ್ ಫಿದಾ ಆಗಿದ್ದಾರೆ. ಹೀಗೆ ಭತ್ತದಲ್ಲಿ ಮೂಡಿದ ಅಪ್ಪುವನ್ನ ದೇವರಂತೆ, ಅವರ ಚಿತ್ರವಿರುವ ಗದ್ದೆಯನ್ನು ದೇವಾಲಯದಂತೆ ಕಾಣುತ್ತಿರುವ ಸತ್ಯನಾರಾಯಣ ಅವ್ರು ನಿತ್ಯವೂ ಕಾಯಿ ಕರ್ಪೂರ ಅರ್ಪಿಸಿ ಅಪ್ಪುವಿಗೆ ಪೂಜೆ ಸಲ್ಲಿಸುತ್ತಾರೆ. ಗದ್ದೆಗೆ ಬರುವ ಪ್ರತಿಯೊಬ್ಬ ಅಭಿಮಾನಿಯೂ ಪಾರಕ್ಷೆಗಳನ್ನು ದೂರದಲ್ಲಿ ಬಿಟ್ಟು ಬರಬೇಕು ಎಂಬ ನಿಯಮ ಜಾರಿ ಮಾಡಿದ್ದಾರೆ. ಡ್ರೋನ್ ಕ್ಯಾಮೆರಾದಲ್ಲಿ ಅಪ್ಪು ಅವರ ಭಾವಚಿತ್ರ ಮನಮೋಹಕವಾಗಿ ಮೂಡಿಬಂದಿದೆ.

Scroll to Top