ಕಾಪು : ಉಚ್ಚಿಲ ದಸರಾ 2023ರ ಅಂಗವಾಗಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಪ್ರತಿಷ್ಠಾಪಿಸಿರುವ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಸಹಿತ ಮಹಾಲಕ್ಷ್ಮೀ ಮಂಟಪದಲ್ಲಿ ಪ್ರತೀದಿನ ನಡೆಯುತ್ತಿರುವ ಸಹಸ್ರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆಗೆ ಉತ್ತಮ ಸ್ಪಂದನೆ ದೊರಕುತ್ತಿದೆ.
ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್ ಉಪಸ್ಥಿತಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ವೇ|ಮೂ| ರಾಘವೇಂದ್ರ ಉಪಾಧ್ಯಾಯ ಅವರ ಮಂತ್ರಘೋಷದೊಂದಿಗೆ ಸಂಜೆ 5.30ಕ್ಕೆ ಸಹಸ್ರ ಸುಮಂಗಲೆಯರ ಸಂಕಲ್ಪ ಸೇವೆಯೊಂದಿಗೆ ಸಾಮೂಹಿಕ ಕುಂಕುಮಾರ್ಚನೆ ಆರಂಭಗೊಳ್ಳುತ್ತದೆ.
ಕಳೆದ ವರ್ಷ ದಾಖಲೆ
ಬ್ರಹ್ಮಕಲಶ ಪೂರ್ಣೋತ್ಸವದ ಸಂದರ್ಭ ಚಾಲನೆ ನೀಡಲಾಗಿದ್ದ ಸಾಮೂಹಿಕ ಕುಂಕುಮಾರ್ಚನೆ ಸೇವೆಯನ್ನು ಪ್ರಥಮ ವರ್ಷದ ದಸರಾ ಸಂದರ್ಭದಲ್ಲೂ ಮುಂದುವರಿಸಲಾಗಿತ್ತು. ಸಹಸ್ರ ಕುಂಕು ಮಾರ್ಚನೆಯ ಸಂಕಲ್ಪವು ಕೋಟಿ ಕುಂಕುಮಾರ್ಚನೆ ಅರ್ಚನೆಯಾಗಿ ಮಾರ್ಪಟ್ಟು ದಾಖಲೆ ಸೃಷ್ಟಿಸಿತ್ತು. ಈ ಸೇವೆಯಲ್ಲಿ ಪಾಲ್ಗೊಳ್ಳುವ ಸುಮಂಗಲೆಯರು ಮಾಂಗಲ್ಯ ಭಾಗ್ಯ, ಮಾಂಗಲ್ಯ ರಕ್ಷಣೆ, ಸಂತಾನ, ಸುಖ, ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಹಿಂದಿನ ವರ್ಷಗಳಲ್ಲಿ ಪಾಲ್ಗೊಂಡ ಬಹಳಷ್ಟು ಮಂದಿಗೆ ತಾಳಿ ಭಾಗ್ಯ, ಸಂತಾನ ಭಾಗ್ಯ ಸಹಿತ ಇಷ್ಟಾರ್ಥಗಳನ್ನು ಅಭಯದಾತೆ ಶ್ರೀ ಮಹಾಲಕ್ಷ್ಮೀ ಕರುಣಿಸಿದ್ದು ಅದಕ್ಕೆ ಪ್ರತಿಯಾಗಿ ಭಕ್ತರು ತಾಯಿಗೆ ವಿಶೇಷ ಹರಕೆಗಳನ್ನು ಸಮರ್ಪಿಸಿದ್ದಾರೆ ಎನ್ನುತ್ತಾರೆ ಡಾ| ಜಿ. ಶಂಕರ್.
ಶಾಲಿನಿ ಜಿ. ಶಂಕರ್, ದ.ಕ. ಮೊಗವೀರ ಮಹಾಜನ ಸಂಘದ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಮಹಾಜನ ಸಂಘದ ಪದಾಧಿಕಾರಿಗಳು, ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ, ನಾಲ್ಕು ಪಟ್ಣ ಮೊಗವೀರ ಮಹಿಳಾ ಸಭಾದ ಅಧ್ಯಕ್ಷೆ ಸುಗುಣಾ ಕರ್ಕೇರ ಹಾಗೂ ವಿವಿಧ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.