ಉಡುಪಿ : ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಅನ್ನ ಆಹಾರವಿಲ್ಲದೆ ನಿತ್ರಾಣಗೊಂಡು ನಡೆಯಲೂ ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ ಸಖಿ ಸೆಂಟರ್‌ಗೆ ದಾಖಲಿಸಿದ್ದು, ಇದೀಗ ಮಹಿಳೆಯ ವಾರೀಸುದಾರರು ಪತ್ತೆಯಾಗದ ಹಿನ್ನಲೆಯಲ್ಲಿ ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ `ಸ್ನೇಹಾಲಯ‘ಕ್ಕೆ ಬುಧವಾರ ದಾಖಲಿಸಿದ್ದಾರೆ.
ಸುಮಾರು 40 ವರ್ಷದ ಈ ಮಹಿಳೆ ಹೊರರಾಜ್ಯದವರಾಗಿದ್ದು, ಮಾತಿಗೆ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ದೈಹಿಕ ಅನಾರೋಗ್ಯಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಹಿಳೆಗೆ ಹೆಚ್ಚಿನ ಆರೈಕೆ ಹಾಗೂ ಪುನರ್ವಸತಿ ಸಮಸ್ಯೆ ಬಂದೊದಗಿದ ಹಿನ್ನಲೆಯಲ್ಲಿ ವಿಶು ಶೆಟ್ಟಿ ಅವರು ಮಂಜೇಶ್ವರದ ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಅವರನ್ನು ವಿನಂತಿಸಿದಾಗ ಅವರು ಮಹಿಳೆಗೆ ಆಶ್ರಯ ನೀಡಲು ಒಪ್ಪಿದ್ದಾರೆ.
ಮಹಿಳೆ ಉಡುಪಿಗೆ ಕಾರ್ಮಿಕಳಾಗಿ ಬಂದಿರುವ ಶಂಕೆಯಿದ್ದು, ವಾರೀಸುದಾರರು ಇದ್ದಲ್ಲಿ ಶಿರ್ವ ಪೊಲೀಸ್ ಠಾಣೆ ಅಥವಾ ಮಂಜೇಶ್ವರದ ಸ್ನೇಹಾಲಯವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಶಿರ್ವ ಠಾಣೆಯ ಪಿಸಿ ರಮ್ಯಾ, ಸಾಮಾಜಿಕ ಕಾರ್ಯಕರ್ತ ರಾಮದಾಸ್ ಪಾಲನ್ ಉದ್ಯಾವರ, ಬೆಳ್ಮಣ್ಣು ವಿಶ್ವನಾಥ ಪಾಟ್ಕರ್ ಸಹಕರಿಸಿದರು. ಮಂಜೇಶ್ವರದ ಸ್ನೇಹಾಲಯಕ್ಕೆ ಕರೆದೊಯ್ಯಲು ವಾಹನ ವ್ಯವಸ್ಥೆಯ ವೆಚ್ಚವನ್ನು ವಿಶು ಶೆಟ್ಟಿ ಭರಿಸಿದರು.